ಗ್ರಾಮೀಣ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕಾದರೆ ನನ್ನನ್ನು ಗೆಲ್ಲಿಸಿ

ಗ್ರಾಮೀಣ ಮಕ್ಕಳಿಗೆ ಶಿಕ್ಷಣ,  ಉದ್ಯೋಗ ಸಿಗಬೇಕಾದರೆ ನನ್ನನ್ನು ಗೆಲ್ಲಿಸಿ

ಹಾಲೇಕಲ್ಲು ಗ್ರಾಮದಲ್ಲಿ ಜಿ.ಬಿ.ವಿನಯ್ ಕುಮಾರ್

ಜಗಳೂರು,ಏ.24- ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕಾದರೆ ನನ್ನನ್ನು ಗೆಲ್ಲಿಸಿ, ನಾನು ಶ್ರಮ ವಹಿಸುತ್ತೇನೆ. ಹೊಸ ವ್ಯವಸ್ಥೆ ಸೃಷ್ಟಿಸಲು ರಾಜಕೀಯದಲ್ಲಿ ಅಧಿಕಾರ ಬೇಕು. ಈ ಬಾರಿ  ನನ್ನನ್ನು ಗೆಲ್ಲಿಸಿ,  ಜಿಲ್ಲೆಯ ಅಭಿವೃದ್ಧಿಯ ದಿಕ್ಕೇ ಬದಲಾಗುತ್ತದೆ ಎಂದು ಲೋಕಸಭೆ  ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ಹಾಲೇಕಲ್ಲು  ಗ್ರಾಮಸ್ಥರನ್ನುದ್ದೇಶಿಸಿ ಮಾತನಾ ಡಿದ ಅವರು, ಗುಲಾಮರಾಗಿ, ಹೇಳಿದ್ದನ್ನು ಕೇಳಿ ಕೊಂಡು ಬದುಕುವ ಸಂಸ್ಕೃತಿ ಇನ್ನು 50 ವರ್ಷವಲ್ಲ, ನೂರು ವರ್ಷ ಆದರೂ ಬದಲಾಗಲ್ಲ. ಈ ಬಾರಿ ಅವಕಾಶ ಸಿಕ್ಕಿದೆ. ಅದನ್ನು ಬಳಸಿಕೊಳ್ಳೋಣ. ಶಿಕ್ಷಣದ ಸಹಾಯದಿಂದ  ಜ್ಞಾನ ಸಂಪಾದನೆ ಮಾಡಿದೆ. ಸೇವೆಗೊಂದು ಅವಕಾಶ ಕೊಡಿ. ಜಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕುಡಿಯುವ ನೀರು, ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕೈಗಾರಿಕೆಗಳ ಸ್ಥಾಪನೆ, ಮೆಕ್ಕೆಜೋಳ ಹೆಚ್ಚಾಗಿ ಬೆಳೆಯಲಾಗುತ್ತದೆ. ಕೋಲ್ಡ್ ಸ್ಟೋರೇಜ್, ಉದ್ಯೋಗ ಸೃಷ್ಟಿಸುವಂಥ ಕೈಗಾರಿಕೆಗಳನ್ನು ತರುತ್ತೇನೆ. ಹಳ್ಳಿ ಹಳ್ಳಿಗಳಲ್ಲೂ ಜನರು ಪ್ರೀತಿ ತೋರುತ್ತಿದ್ದಾರೆ. ನಿಮ್ಮ ಕೆಲಸ ಮಾಡಲು ನಾನು ಬಂದಿರುವುದು. ಯಾವುದೇ ಸ್ವಾರ್ಥ ಸಾಧನೆಗಲ್ಲ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಬದಲಾವಣೆ ಬಯಸಿದ್ದಾರೆ. ಈ ಹಿಂದೆ ಯಾವ ಚುನಾವಣೆಯಲ್ಲೂ ಬದಲಾವಣೆಯ ಅವಕಾಶ ಇರಲಿಲ್ಲ. ಈ ಬಾರಿ ಬಂದಿದೆ. ಪ್ರತಿಯೊಬ್ಬರ ಮನೆಯಲ್ಲೂ ಸಿಲಿಂಡರ್ ಇದೆ. ಈ ಚಿಹ್ನೆಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

error: Content is protected !!