ದೇಶದ ಭದ್ರತೆಗಾಗಿ ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯ

ದೇಶದ ಭದ್ರತೆಗಾಗಿ ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯ

ಹೊನ್ನಾಳಿ, ಮೇ 3 – ದೇಶದ ಭದ್ರತೆಗಾಗಿ ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯವಾಗಿದ್ದು, ಮೂರನೇ ಬಾರಿಗೆ ನರೇಂದ್ರ ಮೋದಿ ಪುನಃ ದೇಶದ ಪ್ರಧಾನಿಯಾಗಿ ಭದ್ರತೆಯೊಂದಿಗೆ ದೇಶದ ಅಭಿವೃದ್ಧಿ ಮಾಡುವುದು ಗ್ಯಾರಂಟಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಗುರುವಾರ ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಮಂಡಳಿ ವತಿಯಿಂದ ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮತಯಾಚನೆ ಸಂಬಂಧ ಹಮ್ಮಿಕೊಂಡಿದ್ದ ಬೃಹತ್ ರೋಡ್‍ಶೋ ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ಕೇಂದ್ರದಿಂದ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ದೇಶದ 10 ಕೋಟಿ ಬಡವರಿಗೆ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಇರಲಿಲ್ಲ, ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಬಡವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ಹೊಂದುವಂತೆ ಮಾಡಿ ಹೊಗೆ ರಹಿತ ಅಡುಗೆ ಮನೆ ಮಾಡಲಾಯಿತು. 28 ಸಾವಿರ ಹಳ್ಳಿಗಳ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಕೇಂದ್ರ ಸರ್ಕಾರ ಎಲ್ಲಾ 28 ಸಾವಿರ ಹಳ್ಳಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿತು.

ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ 50 ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ ಕೇವಲ 74 ಏರ್‍ಪೋರ್ಟ್‍ಗ ಳಿದ್ದವು. ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತಾವದೀಯಲ್ಲಿ 74 ಏರ್‍ಪೋರ್ಟ್‍ಗಳು ನಿರ್ಮಾಣವಾಗಿವೆ, ಈ ಎಲ್ಲಾ ಅಂಶಗಳು ದೇಶದಲ್ಲಿ ಅಭಿವೃದ್ಧಿಯಲ್ಲವೇ? ಎಂದು ಪ್ರಶ್ನಿಸಿದರು.

ಇಂದು ದೇಶದ ಗಡಿ ಕಾಯುವ ಸೈನಿಕರು ಕೂಡಾ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಬಯಸುತ್ತಾರೆ, ಇದಕ್ಕೆ ಕಾರಣ ಯುಪಿಎ ನೇತೃತ್ವದ ಸರ್ಕಾರದಲ್ಲಿ ಸೈನಿಕರು ಭಯೋತ್ಪಾದಕರ ವಿರುದ್ಧ, ಗಡಿಭಾಗದಲ್ಲಿ ನುಸುಳುವ ವಿರೋಧಿಗಳಿಗೆ ಒಂದು ಗುಂಡು ಹೊಡೆ ಯಲು ಕೇಂದ್ರ ಸರ್ಕಾರದ ಆದೇಶ ಕಾಯ ಬೇಕಿತ್ತು. ನರೇಂದ್ರಮೋದಿ ಭಯೋತ್ಪಾದ ಕರಿಗೆ, ಗಡಿ ಭಾಗದ ನುಸುಳುಕೋರರಿಗೆ ಒಂದಲ್ಲ ನಾಲ್ಕು ಗುಂಡು ಹೊಡೆದು ಬನ್ನಿ ಎಂದು ಸೈನಿಕರಿಗೆ ಹುರಿದುಂಬಿಸಿದ್ದಾರೆ ಇದು ನರೇಂದ್ರ ಮೋದಿಯವರ ಎದೆಗಾರಿಕೆ ಎಂದು ಬಣ್ಣಿಸಿದರು.

ಇದುವರೆಗೂ ಯಾವ ಸರ್ಕಾರಗಳ ಕೈಯಲ್ಲಿ ಆಗದಂತಹ ಕಾಶ್ಮೀರ ಸಮಸ್ಯೆಯನ್ನು ಅತ್ಯಂತ ದಿಟ್ಟ ನಿರ್ಧಾರದಿಂದ ಬಗೆ ಹರಿಸಲಾಗಿದೆ. ಕಾಶ್ಮೀರ ರಾಜ್ಯಕ್ಕೆ ಇದ್ದ ವಿಶೇಷ ಸ್ಥಾನಮಾನ ಹೊಂದಿದ್ದ ಕಾಯ್ದೆ 370ನ್ನು ರದ್ದುಗೊಳಿಸಿದ್ದು, ಬಹುದೊಡ್ಡ ಸಾಧನೆಯಾಗಿದೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ,  50 ವರ್ಷಗಳಲ್ಲಿ ಮಾಡಬೇಕಾದ ಅಭಿವೃದ್ಧಿಯನ್ನು ಕೇವಲ 10 ವರ್ಷಗಳಲ್ಲಿ ನರೇಂದ್ರ ಮೋದಿ ಮಾಡಿದ್ದಾರೆ. ಇದು ಕೇವಲ ಟ್ರಯಲ್, ಮುಂದೆ ಪೂರ್ಣ ಪ್ರಮಾಣದ ಅಭಿವೃದ್ಧಿ ಪಿಕ್ಚರ್ ಬಾಕಿ ಇದೆ ಎಂದು ಮೋದಿಯವರು ಹೇಳಿದ್ದಾರೆ. ಪೂರ್ಣ ಪಿಕ್ಚರ್ ವೀಕ್ಷಿಸಿ, ಆನಂದಿಸಲು ಕಮಲಕ್ಕೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಂ.ಪಿ. ರೇಣುಕಾ ಚಾರ್ಯ ಮಾತನಾಡಿ, ಸೂರ್ಯ, ಚಂದ್ರರಿರು ವುದು ಎಷ್ಟು ಸತ್ಯವೋ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಗೆಲುವು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜೆ.ಕೆ.ಸುರೇಶ್ ಸ್ವಾಗತಿಸಿದರು. ಇದಕ್ಕು ಮುನ್ನ ಪಟ್ಟಣದ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್‍ಶೋ ನಡೆಸಲಾಯಿತು.

error: Content is protected !!