ನಮ್ಮ ಬಗ್ಗೆ

Home ನಮ್ಮ ಬಗ್ಗೆ
ವಿಕಾಸ್ ಮೆಳ್ಳೇಕಟ್ಟೆ

ವಿಕಾಸ್ ಮೆಳ್ಳೇಕಟ್ಟೆ

Editor

ವಿಕಾಸ್ ಷಡಾಕ್ಷರಪ್ಪ ಮೆಳ್ಳೇಕಟ್ಟೆ ಜನಿಸಿದ್ದು ಮಾರ್ಚ್ 8, 1973ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕಾಸ್, ತಮ್ಮ ತಂದೆ ಹೆಚ್.ಎನ್. ಷಡಾಕ್ಷರಪ್ಪ ಅವರಿಂದ ಪತ್ರಿಕೋದ್ಯಮದ ದೀಕ್ಷೆ ಪಡೆದಿದ್ದಾರೆ.

ತಂದೆ ಷಡಾಕ್ಷರಪ್ಪ ಅವರ ಸ್ಫೂರ್ತಿಯಿಂದ ಬಾಲ್ಯದಿಂದಲೂ ಸಾಹಿತ್ಯಾಭಿರುಚಿ ಬೆಳೆಸಿಕೊಂಡವರು ವಿಕಾಸ್. ಅದೇ ಪ್ರವೃತ್ತಿ ಮುಂದೆ ಪತ್ರಿಕೋದ್ಯಮದಲ್ಲಿ ವೃತ್ತಿಯಾಗಿ ಪರಿಣಮಿಸಿತು.ಪಿ.ಯು. ಹಂತದಲ್ಲಿ ವಿಜ್ಞಾನ ಇವರ ನೆಚ್ಚಿನ ವಿಷಯವಾಗಿತ್ತು. ಕಂಪ್ಯೂಟರ್ ಸೈನ್ಸ್ ಕಡೆ ಆಸಕ್ತಿ ಹೊಂದಿದ್ದ ವಿಕಾಸ್, ಐ.ಟಿ. ಕ್ಷೇತ್ರಕ್ಕೆ ಕಾಲಿಡುವ ಸಿದ್ಧತೆಯಲ್ಲೂ ಇದ್ದರು.ಆದರೆ, ತಂದೆಯವರ ಆಶಯದಂತೆ ‘ಜನತಾವಾಣಿ’ ಮುನ್ನಡೆಸುವಲ್ಲಿ ಅವರ ಕೈ ಜೋಡಿಸಿದರು.

1996ರಲ್ಲಿ ಇಂಗ್ಲಿಷ್ ಸಾಹಿತ್ಯ ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿದ ಬೆನ್ನಲ್ಲೇ ಪತ್ರಿಕೆಗೆ ಸಹ ಸಂಪಾದಕರಾಗಿ ಸೇರ್ಪಡೆಯಾದರು.ತಂತ್ರಜ್ಞಾನದ ಕಡೆ ಅಪಾರ ಆಸಕ್ತಿ ಹೊಂದಿದ್ದ ವಿಕಾಸ್, ಪತ್ರಿಕೆಗೂ ತಂತ್ರಜ್ಞಾನದ ಲಾಭ ಸಿಗುವಂತೆ ಮಾಡಿದರು. ಪುಟ ವಿನ್ಯಾಸದಿಂದ ಹಿಡಿದು ಮುದ್ರಣದವರೆಗೆ ಪತ್ರಿಕೆಯು ಆಧುನಿಕ ತಂತ್ರಜ್ಞಾನ ಹೊಂದಿರಬೇಕು ಎಂಬುದು ಇವರ ಆಶಯ.ಪತ್ರಿಕೆ ನಿರಂತರವಾಗಿ ಹೊಸತನಕ್ಕೆ ತೆರೆದುಕೊಳ್ಳುವಂತೆ ಮಾಡಿದ ವಿಕಾಸ್, ಪ್ರಯೋಗಶೀಲತೆಯಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.

2011ರಲ್ಲಿ ಮಧ್ಯ ಕರ್ನಾಟಕದ ಆಪ್ತ ಒಡನಾಡಿಯಾದ ಜನತಾವಾಣಿ ಪತ್ರಿಕೆಗೆ ವಿಕಾಸ್ ಸಂಪಾದಕರಾದರು. ಆಧುನಿಕ ಚಿಂತನೆ ಹಾಗೂ ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಾ ಪ್ರಯೋಗಶೀಲತೆಯಿಂದ ಪತ್ರಿಕೆ ನಡೆಯುವಂತೆ ಮಾಡುವಲ್ಲಿ ವಿಕಾಸ್ ಅವರದೇ ಸಾರಥ್ಯ.

ಸಂಸ್ಥಾಪಕ ಸಂಪಾದಕ ಹೆಚ್ಚೆನ್ನೆಸ್

ಸಂಸ್ಥಾಪಕ ಸಂಪಾದಕ ಹೆಚ್ಚೆನ್ನೆಸ್

Founder

1938-2011

ಹೆಚ್.ಎನ್. ಷಡಾಕ್ಷರಪ್ಪ ಅವರು ಕರ್ನಾಟಕದ ಕೇಂದ್ರ ಬಿಂದುವಾಗಿರುವ ದಾವಣಗೆರೆ ನಗರದಿಂದ ಕಳೆದ 47 ವರ್ಷಗಳಿಂದ  ಪ್ರಕಟವಾಗುತ್ತಿರುವ ಜನತಾವಾಣಿ‌’ ಕನ್ನಡ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರು.

1938ರ ಮೇ ಒಂದರಂದು ದಾವಣಗೆರೆ ತಾಲ್ಲೂಕಿನ ಮೆಳ್ಳೇಕಟ್ಟೆ ಗ್ರಾಮದಲ್ಲಿ ಜನಿಸಿದ ಹೆಚ್ಚೆನ್ನೆಸ್ ಅವರು ಬಾಲ್ಯದಿಂದಲೇ ಪತ್ರಿಕೋದ್ಯಮದ ಕಡೆ ಸೆಳೆತ ಹೊಂದಿದ್ದರು.

ಪ್ರೌಢಶಾಲಾ ವಿದ್ಯಾರ್ಥಿ ದಿಸೆಯಲ್ಲಿ ‘ಹಳ್ಳಿಯ ಜ್ಯೋತಿ’ ಕೈ ಬರಹದ ಪತ್ರಿಕೆ ಹಾಗೂ ಕಾಲೇಜು ವಿದ್ಯಾರ್ಥಿ ದಿಸೆಯಲ್ಲಿ ‘ಜನತಾ ಬಂಧು’ ಮಾಸ ಪತ್ರಿಕೆ ಪ್ರಕಟಣೆ ಮಾಡಿದ್ದರು.

ನಂತರ ಹುಬ್ಬಳ್ಳಿಯಲ್ಲಿ ದಿ. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ಹಾಗೂ ‘ವಿಶ್ವವಾಣಿ’ ಸಂಪಾದಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತುಮಕೂರಿನ ಬೃಂದಾವನ ವಾರಪತ್ರಿಕೆಯ ಗೌರವ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

1974ರಲ್ಲಿ ದಾವಣಗೆರೆಯಲ್ಲಿ ಅವರು ಜನತಾವಾಣಿ’ ದಿನಪತ್ರಿಕೆ ಪ್ರಾರಂಭಿಸಿದರು. ಹೆಚ್ಚೆನ್ನೆಸ್ ಎಂದೇ ಹೆಸರಾಗಿದ್ದ ಷಡಾಕ್ಷರಪ್ಪ ಅವರು, ಗಾಂಧೀಜಿ, ಲೋಹಿಯಾ, ಜೆ.ಪಿ., ಅಂಬೇಡ್ಕರ್ ಹಾಗೂ ಬುದ್ಧ – ಬಸವರ ವಿಚಾರಧಾರೆಯ ಚಿಂತನೆಯಲ್ಲಿ ಬೆಳೆದವರು.

1988ರಲ್ಲಿ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. 2004ರಲ್ಲಿ ಅವರು ರಾಜ್ಯೋತ್ಸವ ಪ್ರಶಸ್ತಿ ಹಾಗೂ 2005ರಲ್ಲಿ ಟಿಎಸ್ಸಾರ್ ಪ್ರಶಸ್ತಿಯ ಗೌರವ ಪಡೆದುಕೊಂಡಿದ್ದರು.

ಹಲವಾರು ಸಂಘ – ಸಂಸ್ಥೆಗಳಲ್ಲೂ ಹೆಚ್ಚೆನ್ನೆಸ್ ಸಕ್ರಿಯರಾಗಿ ತೊಡಗಿ ಸಮಾಜಮುಖಿಯಾಗಿದ್ದರು.

ರಾಜ್ಯ ಸಣ್ಣ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಕುದುರೆಮುಖ ಆಂದೋಲನದ ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ, ಮಧ್ಯ ಕರ್ನಾಟಕದ ಬೆದ್ದಲು ಭೂಮಿ ನೀರಾವರಿ ಹೋರಾಟದಲ್ಲಿ ಸಕ್ರಿಯ ಮುಂದಾಳತ್ವ ವಹಿಸಿದ್ದರು. ಐತಿಹಾಸಿಕ ಗೋಕಾಕ್ ಚಳುವಳಿಯಲ್ಲಿ ಪತ್ರಿಕೆಯೊಡನೆ ಸಕ್ರಿಯ ಪಾತ್ರ ವಹಿಸಿದ್ದರು.

ಲಾತೂರ್ ಭೂಕಂಪ ಹಾಗೂ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪತ್ರಿಕೆಯ ಓದುಗರಿಂದ 15 ಲಕ್ಷ ರೂ. ಹಣ ಕೊಡಿಸಿಕೊಟ್ಟ ಸಂವೇದನಾಶೀಲರೂ ಆಗಿದ್ದರು.

ಟಿಎಸ್ಸಾರ್ ಪ್ರಶಸ್ತಿಯಿಂದ ಬಂದ 1 ಲಕ್ಷ ರೂ.ಗಳನ್ನು ‘ಜನತಾವಾಣಿ’ ಹೆಸರಿನಲ್ಲಿ ‘ಓದುಗ ಪ್ರಶಸ್ತಿ’ ನೀಡಲು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಕೊಡುಗೆಯಾಗಿ ಕೊಟ್ಟಿದ್ದರು.

error: Content is protected !!