ಜನರ ನಿರೀಕ್ಷೆಯನ್ನು ಹುಸಿ ಮಾಡಿರುವ ಸಂಸದರನ್ನು ಇಂದು ಬದಲಾಯಿಸದೇ ಇದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ

ಜನರ ನಿರೀಕ್ಷೆಯನ್ನು ಹುಸಿ ಮಾಡಿರುವ ಸಂಸದರನ್ನು ಇಂದು ಬದಲಾಯಿಸದೇ ಇದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ

ಹರಪನಹಳ್ಳಿ, ಮೇ 3 – ಕಳೆದ 4 ಬಾರಿ ಒಬ್ಬರನ್ನೇ ಆಯ್ಕೆ ಮಾಡಿದ ಈ ಕ್ಷೇತ್ರದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿರುವ ಸಂಸದರನ್ನು ಇಂದು ಬದಲಾಯಿಸದೇ ಇದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಚ್ಚವ್ವನಹಳ್ಳಿ, ಕಡಬಗೆರೆ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಮೈದೂರು, ನಂದಿಬೇವೂರು, ಚಿಗಟೇರಿ, ಬಳಿಗನೂರು, ಬೆಣ್ಣೆಹಳ್ಳಿ ಗ್ರಾಮಗಳ ನಂತರ ಹರಪನಹಳ್ಳಿ ಪಟ್ಟಣದಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಮತದಾರರನ್ನುದ್ದೇಶಿಸಿ ಅವರು ಮಾತನಾಡಿದರು.

ನೀವು ಆಯ್ಕೆ ಮಾಡಿದ ಸಂಸದರು ಈ ಭಾಗದ ಯಾವುದೇ ಸಮಸ್ಯೆಗೂ ಸ್ಪಂದಿಸದೇ ಸುಮಾರು 20 ವರ್ಷ ಕಾಲಹರಣ ಮಾಡಿದ್ದು, ಇಂತಹ ಸಂಸದರನ್ನು ಆ ಪಕ್ಷವೇ ಬದಲಾಯಿಸಿ ಅವರ ಕುಟುಂಬಕ್ಕೆ ಮಣೆ ಹಾಕಿದ್ದು, ಈಗ ಆ ಕುಟುಂಬವನ್ನು ಮತದಾರರಾದ ತಾವು ಬದಲಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇಂದು ಹರಪನ ಹಳ್ಳಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.164 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದ ಅವರು ಅನೇಕ ಮಹಿಳೆಯರು ಇಂದು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು  ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.

ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಹಿಂದಿನ ಸಂಸದ ರಿಂದ ನಮ್ಮ ಭಾಗಕ್ಕೆ ಏನೂ ಉಪಯೋಗವಾಗಿಲ್ಲ. ಇಂತಹವರಿಗೆ ಮತ ನೀಡಿದರೆ ನಮ್ಮ ಮತ ವ್ಯರ್ಥವಾದಂತೆ. ನಮ್ಮ ಮತ ಈ ಕ್ಷೇತ್ರದ ಪ್ರತಿನಿಧಿಯನ್ನು ಬದಲಾಯಿಸಬೇಕೆಂದರು.

ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿತ್ವ ಹೊಂದಿರು ವವರು. ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದರೆ ಹರಪನಹಳ್ಳಿ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಅರಸೀಕೆರೆ ಕೊಟ್ರೇಶ್ ಮಾತನಾಡಿ, ಬಿಜೆಪಿಯಿಂದ ಈ ಕ್ಷೇತ್ರಕ್ಕೆ ಮತ್ತು ನಮಗೆ ತುಂಬಾ ಅನ್ಯಾಯವಾಗಿದ್ದು, ಇದು ಮತದಾರರಿಗೆ ತಿಳಿದಿದ್ದು, ಬಿಜೆಪಿ ವಿರುದ್ಧ ನಾವು ಸೇಡು ತೀರಿಸಿಕೊಳ್ಳಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ವಿ.ಅಂಜಿನಪ್ಪ, ಕುಬೇರಪ್ಪ ಬಿ.ಕೆ.ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 

error: Content is protected !!