`ಸ್ವಾಭಿಮಾನಿಯಾಗಿ ಸ್ಪರ್ಧಿಸಿರುವ ನನಗೆ ಮತ ನೀಡಿ’ ಹೊನ್ನಾಳಿಯಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಮನವಿ

`ಸ್ವಾಭಿಮಾನಿಯಾಗಿ ಸ್ಪರ್ಧಿಸಿರುವ ನನಗೆ ಮತ ನೀಡಿ’  ಹೊನ್ನಾಳಿಯಲ್ಲಿ  ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಮನವಿ

ಹೊನ್ನಾಳಿ, ಮೇ 3- ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್  ಇಂದು ಹೊನ್ನಾಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.   

ಹೊನ್ನಾಳಿ – ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮಕ್ಕೆ ವಿನಯ್ ಕುಮಾರ್ ಬರುತ್ತಿದ್ದಂತೆ ಗ್ರಾಮದ ನೂರಾರು ಯುವಕರು ಬಿಸಿಲಿನ ಝಳದ ನಡುವೆಯೂ ರೋಡ್ ಶೋನಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.  

ಈ ವೇಳೆ ಮಾಜಿ ಸೈನಿಕರಾದ ಉಮೇಶ್, ಭೋವಿ ಸಮಾಜದ ಅಧ್ಯಕ್ಷ ನಾಗರಾಜಪ್ಪ, ಮಾದನಬಾವಿ ಕರಿಬಸಪ್ಪ, ಚನ್ನೇಶ್, ದೊಡ್ಡೆತ್ತಿನಹಳ್ಳಿ ಕರಿಬಸಪ್ಪ, ತಗ್ಗಿನಹಳ್ಳಿ ನಾಗೇಶ, ಗಣೇಶ, ಹಿರೇಗೋಣಿಗೆರೆ ಗ್ರಾಮದ ಹನುಮಂತು, ಹುಲುಗೇಶ್ ಮತ್ತಿತರರು ಹಾಜರಿದ್ದರು.   

ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ವಿನಯ್ ಕುಮಾರ್, ದಾವಣಗೆರೆ ಜಿಲ್ಲೆಯಲ್ಲಿ ಎರಡು ಕುಟುಂಬದವರಿಗೆ ಮಾತ್ರ ಅಧಿಕಾರ ಸಿಕ್ಕಿದೆ. ಈ ಬಾರಿ ಸ್ವಾಭಿಮಾನಿಯಾಗಿ, ನಿಮ್ಮೆಲ್ಲರ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದೇನೆ. ಅಭಿವೃದ್ಧಿಗಾಗಿ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ನನಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು. 

ನನ್ನ ಗುರುತು ಗ್ಯಾಸ್ ಸಿಲಿಂಡರ್ ಚಿಹ್ನೆ. ಕ್ರಮ ಸಂಖ್ಯೆ 28. ನೀವೂ ಮತ ಹಾಕಿ. ಒಬ್ಬರು ಕನಿಷ್ಠ ಎಂದರೂ 300 ಮತಗಳನ್ನು ಹಾಕಿಸಿ. ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಕೆಲಸ ಮಾಡುವ ಜೊತೆಗೆ ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. 

ದಾಗಿನಕಟ್ಟೆ ಗ್ರಾಮದ ಸಂಗಾಹಳ್ಳಿ ಕರಿಬಸಪ್ಪ, ಯಲೋದಹಳ್ಳಿ ಕೆ. ಎಸ್. ರಾಜಪ್ಪ, ಸಂಗಾಹಳ್ಳಿ ರಾಮಚಂದ್ರಪ್ಪ, ಪರಮೇಶ, ಸತೀಶ, ಹನುಮಂತ, ರಾಜೇಶ, ಸುರೇಶ ಮತ್ತಿತರರು ಉಪಸ್ಥಿತರಿದ್ದರು.

error: Content is protected !!