ಜನರ ಪರ ಇರುವ ಕಾಂಗ್ರೆಸ್‌ಗೆ ಮತ ನೀಡಿ

ಜನರ ಪರ ಇರುವ ಕಾಂಗ್ರೆಸ್‌ಗೆ ಮತ ನೀಡಿ

ಕುಂಟೆತ್ತು…

ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಆರು ಹಲ್ಲಿನ ಹೋರಿ, ದೆಹಲಿ ಬರುವವರೆಗೂ ದಣಿವರಿಯದೇ ಸಾಗಲಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕುಂಟೆತ್ತು. ಅದು ದೆಹಲಿ ತಲುಪುವುದು ಅಸಾಧ್ಯ. ಕಾರಣ ಅದನ್ನು ಇಲ್ಲಿಯೇ ಶಿಂಗ್ಲಾವಿನಲ್ಲಿಯೇ ಇಡಿ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ರಾಣೇಬೆನ್ನೂರು, ಮೇ 3- ದಲಿತರ, ಅಲ್ಪಸಂಖ್ಯಾತರ, ಬಡವರ, ಹಿಂದುಳಿದವರ, ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳ, ಅವರಿಗೆ ದೊರಕುವ ಮೀಸಲಾತಿಯ ಸೌಲಭ್ಯಗಳನ್ನು ವಿರೋಧಿಸುವ ಆರ್ಎಸ್ಎಸ್ ಹಾಗೂ ಬಿಜೆಪಿಗೆ ಮತ ನೀಡಬೇಡಿ. ಆ ಎಲ್ಲಾ ಜನರ ಪರ ಇರುವ ಕಾಂಗ್ರೆಸ್‌ಗೆ ಮತ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿಕೊಂಡರು.

ಇಲ್ಲಿನ ಉರ್ದು ಹೈಸ್ಕೂಲ್ ಮೈದಾನದಲ್ಲಿ ಇಂದು ಏರ್ಪಾಡಾಗಿದ್ದ ಪ್ರಜಾಧ್ವನಿ 2 ಯಾತ್ರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರಿಗೆ ಮತ ಯಾಚಿಸಿ ಅವರು ಮಾತನಾಡಿದರು.

ಈ ಎಲ್ಲಾ ತುಳಿಯಲ್ಪಟ್ಟ ಜನರ ಕಲ್ಯಾಣದ ಮಂಡಲ ವರದಿಯ ಜಾರಿಯನ್ನು ವಿರೋಧಸಿ, ಅಂದಿನ ಶಾಲಾ – ಕಾಲೇಜು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಮೀಸಲಾತಿಯ ವಿರುದ್ಧ ಹೋರಾಟ ಮಾಡಿದ ಆರ್ಎಸ್ಎಸ್ ಮತ್ತು ಬಿಜೆಪಿಯ ನರೇಂದ್ರ ಮೋದಿ ಹಾಗೂ ಅಮಿತ್ ಷಾ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಂತವರಿಗೆ ಈ ಜನರ ಮತ ಕೇಳುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ತರಾಟೆ ತೆಗೆದುಕೊಂಡರು.

ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಹತ್ತು ವರ್ಷ ಆಡಳಿತ ನಡೆಸಿದ ಮೋದಿ ತಾವು ಹೇಳಿದ ಯಾವ ಮಾತುಗಳಿಗೆ ಬದ್ಧತೆ ಇಟ್ಟುಕೊಂಡು ನಡೆದಿದ್ದಾರೆ? ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ, ಮೋದಿ ಹಾಗೂ ಬಿಜೆಪಿ ಕೇವಲ ಸುಳ್ಳು ಹೇಳುತ್ತಾ ದೇಶದ ಜನರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ಅಂತವರಿಗೆ ಮತ ನೀಡಿ ನಿಮ್ಮ, ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

ಕುರುಬರ ಮತ ಬಿಜೆಪಿಗಿಲ್ಲ…

ರಾಜ್ಯದಲ್ಲಿ ಶೇ.7 ರಷ್ಟಿರುವ ಕುರುಬರಿಗೆ ಈ ಚುನಾವಣೆಯಲ್ಲಿ ಒಬ್ಬರಿಗೂ ಬಿಜೆಪಿ ಟಿಕೆಟ್ ನೀಡಲಿಲ್ಲ, ಆರ್ಎಸ್ಎಸ್ ನಿಂದ ಬಂದು ಪಕ್ಷದ ಬಲವರ್ಧನೆಗೆ ದುಡಿದ ಈಶ್ವರಪ್ಪ ಮಗನಿಗೆ ಟಿಕೆಟ್ ಕೊಡದೇ  ಜನತಾದಳದಿಂದ ಬಂದ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಿದ್ದಾರೆ. ರಾಜ್ಯದ ಎಲ್ಲಾ ಕುರುಬರು ಒಂದೇ ಒಂದು ಮತವನ್ನು ಬಿಜೆಪಿಗೆ ಕೊಡಬಾರದು ನಾನು ಕುರುಬನಾಗಿ ಈ ಮಾತು ಹೇಳುತ್ತಿಲ್ಲ. ಸಮಸಮಾಜ ನಿರ್ಮಿಸುವ ಆಕಾಂಕ್ಷೆ ಉಳ್ಳವನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಕೇವಲ ಸುಳ್ಳುಗಳನ್ನೇ ಹೇಳುತ್ತಾ ದೇಶದ ಜನರಿಗೆ ಯಾಮಾರಿಸುತ್ತಿರುವ ಬಿಜೆಪಿಗೆ ಮತ ನೀಡದೇ ನುಡಿದಂತೆ ನಡೆಯುವ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿರಿ ಎಂದು ಹೇಳಿದ ಹಿರಿಯ ಮುಖಂಡ, ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಮಾತನಾಡಿದರು.

50 ವರ್ಷ ನನಗೆ ಆಶೀರ್ವಾದ ಮಾಡಿ, ಈಗ ಮಗನಿಗೂ ಆಶೀರ್ವದಿಸಿದ್ದೀರಿ. ಈ ಚುನಾವಣೆ ಯಲ್ಲೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನ ಆತ್ಮಕ್ಕೆ ನೆಮ್ಮದಿ ತನ್ನಿರಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ ಸ್ವಾಗತಿಸಿದರು. ಶಾಸಕ ಪ್ರಕಾಶ ಕೋಳಿವಾಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಭ್ಯರ್ಥಿ ಆನಂದ ಗಡ್ಡದೇವರಮಠ, ಸಚಿವ ಹೆಚ್.ಕೆ.ಪಾಟೀಲ, ಗದಗ ಹಾಗೂ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಸಮಾರಂಭದ ವೇದಿಕೆಯಲ್ಲಿದ್ದರು.

error: Content is protected !!