ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)
ವಿದ್ಯಾರ್ಥಿಗಳು ವಿಶೇಷಾಧ್ಯಯನಕ್ಕಾಗಿ ವಿದೇಶಕ್ಕೆ ಹೋಗ ಬಯಸುವರು. ಆದರೆ ಅದಕ್ಕೆ ಬೇಕಾದ ಆರ್ಥಿಕ ಹೊಂದಾಣಿಕೆಗೆ ಕಷ್ಟವಾಗಬಹುದು. ವ್ಯವಹಾರದಲ್ಲಿ ಪಾಲುದಾರರೊಂದಿಗಿದ್ದ ಒಪ್ಪಂದವನ್ನು ನವೀಕರಿಸುವ ಮೊದಲು ಹಲವು ಬದಲಾವಣೆ ಮಾಡಿಕೊಳ್ಳುವುದು ಮೇಲು. ಆದಾಯ ಇಲಾಖೆ ನೌಕರರು ಕೆಲಸದ ಮೇಲೆ ಬೇರೆ ಊರಿಗೆ ಕೆಲಕಾಲ ಹೋಗಬೇಕಾಗಬಹುದು. ಆದಾಯದ ಮೂಲದಲ್ಲಿ ಹೆಚ್ಚಳ, ನೃತ್ಯ-ಕಲೆಗಾರರಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚಲಿದೆ. ವೈದ್ಯರಿಗೆ ಉತ್ತಮ ದಿನಗಳು ಭಾನು-ಸೋಮ-ಮಂಗಳ-ಶುಭ ದಿನಗಳು.
ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)
ಸಾಕು ಪ್ರಾಣಿಗಳ ವಿಷಯದಲ್ಲಿ ಎಚ್ಚರದಿಂದಿರಿ, ಹೊಸ ಮನೆ ಕೊಳ್ಳಲು ಅಥವಾ ಆಸ್ತಿ ಖರೀದಿಸಲು ಈಗ ದಿನಗಳು ಉತ್ತಮವಾಗಿವೆ. ಕಾರ್ಖಾನೆ ಮಾಲೀಕರು ಕಾರ್ಮಿಕರ ಬೇಡಿಕೆಗಳನ್ನು ತಕ್ಕಮಟ್ಟಿಗೆ ಈಡೇರಿಸುವುದು ಮೇಲು. ಇಲ್ಲವಾದಲ್ಲಿ ಅದರ ಪರಿಣಾಮ ಉತ್ಪಾದನೆ ಮೇಲೆ ಬೀರಬಹುದು, ಕಟ್ಟಡ ನಿರ್ಮಾತೃಗಳಿಗೆ ಬೇಡಿಕೆ ಹೆಚ್ಚಲಿದೆ. ಹೆಂಡತಿ ಕಡೆಯಿಂದ ಸ್ವಲ್ಪ ಕೃಷಿ ಜಮೀನು ದೊರೆಯಬಹುದು. ಮನೆಯ ಹಿರಿಯರಿಗೆ ತೀರ್ಥ ಕ್ಷೇತ್ರಗಳ ಸಂದರ್ಶನ ಭಾಗ್ಯ ಒದಗಿಬರಲಿದೆ.ಮಹಿಳೆಯರಿಗೆ ಉತ್ತಮ ದಿನಗಳು. ಗುರು-ಶುಕ್ರ-ಶನಿ-ಶುಭ ದಿನಗಳು.
ಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)
ಸ್ವಾಭಿಮಾನಿಗಳಾದ ನೀವು ಆತ್ಮಗೌರವಕ್ಕೆ ಚ್ಯುತಿಬರದಂತೆ ಎಚ್ಚರವಹಿಸಿರಿ, ಆಕಸ್ಮಿಕವಾಗಿ ಬಂದ ಹಣಕ್ಕಾಗಿ ನಿಮ್ಮೊಂದಿಗೆ ಆತ್ಮೀಯರಂತೆ ನಟಿಸುವವರು ಬರುವರು. ಅವರ ಬಗ್ಗೆ ಎಚ್ಚರದಿಂದಿರಿ, ಹೊಸದಾಗಿ ನೌಕರಿ ಸೇರಿರುವವರಿಗೆ ಕರ್ತವ್ಯದಲ್ಲಿ ಅನೇಕ ಗೊಂದಲಗಳು ಕಾಣಲಿದ್ದು, ಅದನ್ನು ಅನುಭವಿ ಮೇಲಾಧಿಕಾರಿಗೊಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವಿರಿ, ಮೇಲು ಗುತ್ತಿಗೆದಾರರ ಹಳೇ ಬಾಕಿ ಹಣ ಈಗ ಕೈ ಸೇರುವ ಸಮಯ, ದುರಾಸೆಯಿಂದ ಕೆಟ್ಟಮಾರ್ಗದಲ್ಲಿ ಸಂಪಾದಿಸಲು ಯತ್ನಿಸಬೇಡಿ, ಆದಾಯದ ಮೂಲದಲ್ಲಿ ಹೆಚ್ಚಳ ಕಂಡುಬರಲಿದೆ. ಭಾನು-ಬುಧ-ಗುರು-ಶುಭ ದಿನಗಳು.
ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)
ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡವರಿಗೆ ಸಾರ್ವಜನಿಕವಾಗಿ ಸನ್ಮಾನ ವಾಗಲಿದೆ. ಬಂಧುಗಳ ನಿರಂತರ ಗಮನಾಗಮನದಿಂದ ಮನೆಯ ಖರ್ಚು- ವೆಚ್ಚಗಳಲ್ಲಿ ವ್ಯತ್ಯಾಸವಾಗಲಿದೆ. ಕಷ್ಟಪಟ್ಟು ಬೆಳೆದ ರೈತರ ಬೆಳೆಗಳಿಗೆ ಮಧ್ಯವರ್ತಿಗಳ ಅಥವಾ ಕಳ್ಳರ ಕಾಟ ಹೆಚ್ಚಾಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕುಲದೇವತಾ ದರ್ಶನ ಪಡೆಯಿರಿ, ಹೆಚ್ಚಲಿರುವ ಆದಾಯದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯದ ಕಡೆ ತಿರುಗಿಸುವುದು ಉತ್ತಮ, ಸರ್ಕಾರಿ ಉನ್ನತಾಧಿಕಾರಿಗಳಿಗೆ ಕಿರಿಕಿರಿ-ಪ್ರಸಂಗ ಎದುರಾಗಲಿದೆ. ಸೋಮ-ಮಂಗಳ-ಶುಕ್ರ-ಶುಭ ದಿನಗಳು
ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)
ಸಂಬಂಧಿಗಳ ಆಸ್ತಿಕೊಳ್ಳುವ ಸಮಯದಲ್ಲಿ ಬಂಧುಗಳಿಂದಲೇ ತಕ ರಾರು, ಬಹಳ ದಿನಗಳಿಂದ ಸರ್ಕಾರದಿಂದ ಆಗಬೇಕಾಗಿರುವ ಕೆಲಸಗಳು ಪ್ರಭಾವೀ ವ್ಯಕ್ತಿಗಳಿಂದ ನೆರವೇರಲಿವೆ. ನಿವೃತ್ತಿಯಂಚಿನಲ್ಲಿರುವವರು ತಮ್ಮ ಮುಂದಿನ ಜೀವನದ ಬಗ್ಗೆ ಈಗಲೇ ಆಲೊಚಿಸುವುದು ಮೇಲು. ವೈಯಕ್ತಿಕ ಆರೋಗ್ಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ, ಅಪರೂಪಕ್ಕೆ ಬರಲಿರುವ ಅತಿಥಿಗಳಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಲಿದೆ. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಬೇಡ ಯುವಕರಿಗೆ ಉತ್ತಮ ದಿನಗಳು. ಭಾನು-ಸೋಮ-ಬುಧ-ಶುಭ ದಿನಗಳು.
ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)
ನಿಮ್ಮ ಬಹು ಆಕಾಂಕ್ಷಿತ ಕೆಲಸಗಳಿಗೆ ಕಾನೂನಾತ್ಮಕ ಅಡಚಣೆಗಳು ಬರಲಿವೆ, ಅವುಗಳನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿರಿ, ಮನೆಯಲ್ಲಿ ಹಿರಿಯರ ಆಣತಿಯಂತೆ ನಡೆದುಕೊಳ್ಳುವುದರಲ್ಲಿಯೇ ನಿಮ್ಮ ಶ್ರೇಯಸ್ಸಡಗಿದೆ. ವಿಜ್ಞಾನ ಕ್ಷೇತ್ರದಲ್ಲಿ ತೊಡಗಿ ಕೊಂಡವರಿಗೆ ಮತ್ತು ಸಂಶೋಧನಾ ರಂಗದಲ್ಲಿರುವವರಿಗೆ ಸರ್ಕಾರದಿಂದ ಧನ ಸಹಾಯ ಸಿಗಲಿದೆ, ವೃತ್ತಿಗೆ ಸಂಬಂಧಿಸಿದಂತೆ ಪ್ರಯಾಣ ಅನಿವಾರ್ಯವಾಗಲಿದ್ದು, ಪೂರ್ವಸಿದ್ಧತೆಯೊಂದಿಗೆ ಹೊರಡುವುದು ಉತ್ತಮ. ಮಂಗಳ-ಬುಧ-ಶುಕ್ರ-ಶುಭ ದಿನಗಳು.
ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)
ಖಾಸಗಿ ಕಂಪನಿಗಳಲ್ಲಿ ಪ್ರಾಮಾಣಿಕವಾಗಿ ದುಡಿಯುವ ನೌಕರರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮನೆಯಲ್ಲಿ ಮಕ್ಕಳ ನಡಾವಳಿಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬರಲಿದ್ದು, ಅದರಿಂದ ಮನೆಯಲ್ಲಿ ಅಶಾಂತಿ ಮೂಡಬಹುದು. ನಿಮ್ಮ ಹರಿತವಾದ ಮಾತುಗಳು ಬೇರೆಯವರಿಗೆ ಇರುಸು-ಮುರುಸು ಉಂಟಾಗ ಬಹುದು ಅಥವಾ ವಿನಾಕಾರಣ ವಾದ-ವಿವಾದಗಳಿಗೆ ಅವಕಾಶವಾಗಬಹುದು. ಆದಾಯದಲ್ಲಿ ಹೆಚ್ಚಳವಾಯಿತೆಂದು ವೆಚ್ಚ ಹೆಚ್ಚಾಗದಂತೆ ಎಚ್ಚರ ವಹಿಸಿ, ಅಧಿಕಾರಿಗಳು ಸಾಕಷ್ಟು ಎಚ್ಚರದಿಂದಿರುವುದು ಮೇಲು. ಗುರು-ಶುಕ್ರ-ಶನಿ-ಶುಭ ದಿನಗಳು.
ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)
ಮನೆಯ ಹಿರಿಯರಿಗೆ ಗೊತ್ತಾಗದಂತೆ ನಡೆಯಲಿರುವ ಅನೇಕ ಘಟನೆಗಳು ಅವರಿಗೆ ಬೇಸರವನ್ನು ತರಬಹುದು. ಮತ್ತು ಕೌಟುಂಬಿಕ ಘರ್ಷಣೆಗಳಿಗೆ ಕಾರಣವಾಗಬಹುದು, ಸಾಧ್ಯವಾದಷ್ಟು ಇದನ್ನು ತಡೆಯಲು ಪ್ರಯತ್ನಿಸಿ, ಹೊಸದಾಗಿ ಮನೆಗೆ ಬಂದ ಸೊಸೆ ಕುಟುಂಬದ ಸಂಪ್ರದಾಯಗಳನ್ನು, ಮನೆತನದ ರಿವಾಜು ಗಳನ್ನು ತಿಳಿಯುವುದು ಉತ್ತಮ. ಯುವ ಜನರು ತಾವು ಹಠ ಹಿಡಿದು ಮುಂದುವರೆದಲ್ಲಿ ಮಾತ್ರ ಕೆಲಸ ಸಾಧಿಸಲು ಸಾಧ್ಯ, ಸಂಪಾದನೆ ಹೆಚ್ಚಲ್ಲದಿದ್ದರೂ ಸಂಸಾರ ನಿರ್ವಹಣೆಗೇನೂ ತೊಂದರೆಯಿಲ್ಲ, ಖರೀದಿ ಯಾವುದೇ ಇದ್ದರೂ ಇತಿಮಿತಿಯಲ್ಲಿರುವುದು ಮೇಲು. ಮಂಗಳ-ಗುರು-ಶುಕ್ರ-ಶುಭ ದಿನಗಳು.
ಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)
ವಾಹನವನ್ನು ಖರೀದಿಸುವ ಮೊದಲು ಅದರ ದಾಖಲೆ ಮತ್ತು ಅದರ ಕ್ಷಮತೆ ಬಗ್ಗೆ ತಿಳಿಯುವುದು ಮೇಲು, ಸಾಮಾಜಿಕ ಸೇವೆಯಲ್ಲಿ ತೊಡಗಲು ಮನಸ್ಸು ಮಾಡುವಿರಿ, ಅತಿಯಾದ ಮೋಜು-ಮಸ್ತಿ ಬಗ್ಗೆ ಅಲಕ್ಷೆ ತೋರಿದಲ್ಲಿ ಅದು ಆರೋಗ್ಯದ ಮೇಲೆ ಅಡ್ದ ಪರಿಣಾಮ ಬೀರಬಹುದು. ಹೊಸದಾಗಿ ರಕ್ಷಣಾ ಇಲಾಖೆಯಲ್ಲಿ ಸೇವೆಗೆ ಸೇರಿದ ಯುವಕರಿಗೆ ಅಲ್ಲಿಯ ವಾತಾವರಣಕ್ಕೆ ಹೊಂದಿ ಕೊಳ್ಳಲು ಕಷ್ಟಪಡುವರು, ಮನೆಯಲ್ಲಿ ನಡೆಯಲಿರುವ ಮಂಗಳ ಕಾರ್ಯಗಳಿಗೆ ಭರದ ಸಿದ್ಧತೆ, ಗುರುಗಳನ್ನು ಆರಾಧಿಸಿ. ಭಾನು-ಸೋಮ-ಗುರು-ಶುಭ ದಿನಗಳು.
ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)
ಅಧ್ಯಾತ್ಮ ವಿಷಯಗಳ ಉಪನ್ಯಾಸಕರಿಗೆ ಅನೇಕ ಮಠ-ಮಾನ್ಯಗಳಿಂದ ಆಹ್ವಾನ, ಮುಂದಾಲೋಚನೆಯಿಂದ ಖರೀದಿಸಿದ್ದ ಆಸ್ತಿಯೊಂದಕ್ಕೆ ನಿರೀಕ್ಷಿತ ಬೆಂಬಲಿತ ಬೆಲೆ ದೊರೆಯಲಿದೆ, ಇಷ್ಟಪಟ್ಟು ಆರಂಭಿಸಿದ ಕೆಲಸವನ್ನು ಕಷ್ಟವಾದರೂ ಮಾಡುವಿರಿ, ಮಕ್ಕಳ ಆಟಿಕೆ ಸಾಮಾನುಗಳ ತಯಾರಕರಿಗೆ ಹಾಗೂ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ನಷ್ಟದಲ್ಲಿದ್ದ ಸುಗಂಧ ದ್ರವ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬರಲಿದೆ. ಆದಾಯಕ್ಕೆ ತಕ್ಕಂತೆ ಮನೆ ನಡೆಸುವ ಕಲೆಯನ್ನು ಗೃಹಿಣಿಯರು ರೂಢಿಸಿಕೊಳ್ಳುವುದು ಉತ್ತಮ. ಗೊಂದಲಗಳಿಂದ ದೂರವಿರುವುದು ಉತ್ತಮ. ಸೋಮ-ಶುಕ್ರ-ಶನಿ-ಶುಭ ದಿನಗಳು.
ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)
ಕಳೆದುಹೋಗುತ್ತಿರುವ ಮನೆತನದ ಗೌರವವನ್ನು ಮರಳಿ ಪಡೆಯಲು ಹಿರಿಯರು ಶ್ರಮಪಡುವರು. ವಸ್ತುಗಳ ಖರೀದಿಗೂ ಮುನ್ನ ಅದರ ಅವಶ್ಯಕತೆಯ ಇತಿಮಿತಿಗಳನ್ನು ಅರಿಯುವುದು ಮೇಲು. ಸಿನಿಮಾ ಸಾಹಸ ಕಲಾವಿದರಿಗೆ ಸಂಪಾದನೆ ಹೆಚ್ಚಲಿದೆ. ಕಾರಣಾಂತರದಿಂದ ನಿಂತುಹೋಗಿದ್ದ ಮದುವೆ ಮಾತುಕತೆ ಮತ್ತೆ ಮುನ್ನೆಲೆಗೆ ಬರಲಿದೆ. ಯುವಕರು ರಾಜಕೀಯರಂಗವನ್ನು ಪ್ರವೇಶಿಸುಮುನ್ನ ಪಕ್ಷದ ಸಿದ್ಧಾಂತದ ಅರಿವಿರುವುದು ಉತ್ತಮ. ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಅರಿಯಲು ಅನಿರೀಕ್ಷಿತವಾಗಿ ಧನಲಾಭವಾಗಲಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿ. ಭಾನು-ಗುರು-ಶನಿ-ಶುಭ ದಿನಗಳು.
ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)
ದೊಡ್ಡ-ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಅದಕ್ಕೆ ಬೇಕಾದ ಆರ್ಥಿಕ ಮೂಲಗಳನ್ನು ಮೊದಲೇ ಕಂಡುಕೊಳ್ಳುವುದು ಉತ್ತಮ, ಮತ್ತೊಬ್ಬರ ವಾಹನಗಳನ್ನು ಚಾಲಿಸುವಾಗ ಬಹಳ ಎಚ್ಚರದಿಂದಿರಿ, ವಾಣಿಜ್ಯ ಬೆಳೆಗಳನ್ನು ಮಾರಾಟ ಮಾಡುವವರಿಗೆ ವಹಿವಾಟು ಹೆಚ್ಚಲಿದೆ. ಹೈನುಗಾರಿಕೆ ಹೆಚ್ಚಿನ ಲಾಭವನ್ನು ತರದೇ ಹೋದರೂ ನಷ್ಟವನ್ನುಂಟುಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಸಂಬಂಧಿಗಳೊಂದಿಗಿರುವ ಬಾಂಧವ್ಯವನ್ನು ಕಡಿದುಕೊಳ್ಳಬೇಡಿ ಸುಖ-ಪ್ರವಾಸಕ್ಕೆ ಬೇಕಾದ ಪೂರ್ವಸಿದ್ಧತೆ ಚೆನ್ನಾಗಿರಲಿ. ವೈಯಕ್ತಿಕ ಆರೊಗ್ಯವನ್ನು ಅಲಕ್ಷಿಸಬೇಡಿ ಗುರುಗಳನ್ನು ಆರಾಧಿಸಿ. ಬುಧ-ಗುರು-ಶುಕ್ರ-ಶುಭ ದಿನಗಳು.
ವಿಶೇಷ ದಿನಗಳು : ದಿನಾಂಕ : 2-10-2023 ನೇ ಸೋಮವಾರ ಮಹಾಭರಣಿ, ದಿನಾಂಕ : 6-10-2023 ನೇ ಶುಕ್ರವಾರ ಮಧ್ಯಾಷ್ಟಮೀ
ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]