ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ : ಎಸ್ಸೆಸ್ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ರೋಡ್ ಷೋ

ಕಾಂಗ್ರೆಸ್‌ನಿಂದ  ಮಾತ್ರ ಅಭಿವೃದ್ಧಿ ಸಾಧ್ಯ : ಎಸ್ಸೆಸ್ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ರೋಡ್ ಷೋ

ದಾವಣಗೆರೆ, ಮೆ 3 – ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 13, 19, 20 ಮತ್ತು 21ನೇ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ಭರ್ಜರಿ ರೋಡ್ ಷೋ ನಡೆಸಿದರು.

ನಂತರ ಮಾತನಾಡಿದ ಎಸ್ಸೆಸ್, ಈ ದೇಶದಲ್ಲಿ ಏನೇ ಅಭಿವೃದ್ಧಿ ಆಗಿದ್ದರೂ ಅದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಾತ್ರ. ಬಿಜೆಪಿ 10 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ 60 ವರ್ಷದ ಆಡಳಿತದಲ್ಲಿ ಮಾಡಿದ ಆಸ್ತಿಗಳನ್ನು ಮಾರಾಟ ಮಾಡಿದ್ದೇ ಸಾಧನೆ ಎಂದರು.

ಬಿಜೆಪಿ ಸರ್ಕಾರ 10 ವರ್ಷಗಳ ಕಾಲ ದೇಶದ ಆಡಳಿತ ಚುಕ್ಕಾಣಿ ಹಿಡಿದು ದೇಶದ ಅಸ್ತಿತ್ವವನ್ನೇ ಹಾಳು ಮಾಡಿದರು. ಇಂದು ದೇಶದಲ್ಲಿ ಜನರು ನೆಮ್ಮದಿ ಇಲ್ಲದ ಜೀವನ ನಡೆಸುತ್ತಿದ್ದು, ಇಂತಹ ವ್ಯವಸ್ಥೆ ತೆಗೆದು ಹಾಕಲು ಈಗಾಗಲೇ ಜನರು ತೀರ್ಮಾನಿಸಿದ್ದು, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನೆಮ್ಮದಿ ಜೀವನ ನಡೆಸಬಹುದು ಎಂದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜ ನೆಗಳನ್ನು ಜಾರಿಗೆ ತಂದು ಇಂದು ದಾವಣ ಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.122 ಕೋಟಿಯಷ್ಟು ಹಣವನ್ನು ಫಲಾನುಭವಿ ಗಳಿಗೆ ವಿತರಿಸಲಾಗಿದೆ ಎಂದರು.

ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು  ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಮೀನಾಕ್ಷಿ ಜಗದೀಶ್, ಸೌಮ್ಯ ನರೇಂದ್ರ, ಶಿವಲೀಲಾ ಕೊಟ್ರಯ್ಯ, ಕೆ.ಚಮನ್‍ಸಾಬ್, ಸೈಯದ್ ಚಾರ್ಲಿ, ಮಾಜಿ ಸದಸ್ಯ ಪರಸಪ್ಪ, ಮುಖಂಡರುಗಳಾದ ಲಾಲ್ ಆರೀಫ್, ಸಾವನ್ ಜೈನ್, ಅಜ್ಜಪ್ಪ, ಧರ್ಮಣ್ಣ, ಬಡೇಸಾಬ್, ರಘು ಡಿ., ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಉದ್ಯಮಿಗಳಾದ ಅಥಣಿ ಎಸ್. ವೀರಣ್ಣ, ಎಸ್.ಕೆ.ವೀರಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!