ತಳ ಸಮುದಾಯದ ಸಮಸ್ಯೆ ಪರಿಹರಿಸಲು ಶ್ರಮಿಸುತ್ತಿದ್ದ ಶಿವರಾಮ್ ಛಲವಾದಿ ಸಮಾಜವನ್ನೂ ಸದೃಢವಾಗಿ ಕಟ್ಟಲು ಪಣ ತೊಟ್ಟಿದ್ದರು

ತಳ ಸಮುದಾಯದ ಸಮಸ್ಯೆ ಪರಿಹರಿಸಲು ಶ್ರಮಿಸುತ್ತಿದ್ದ ಶಿವರಾಮ್  ಛಲವಾದಿ ಸಮಾಜವನ್ನೂ ಸದೃಢವಾಗಿ ಕಟ್ಟಲು ಪಣ ತೊಟ್ಟಿದ್ದರು

ಹರಪನಹಳ್ಳಿ ಕಾರ್ಯಕ್ರಮದಲ್ಲಿ  ನಿಲಗುಂದದ ಗುಡ್ಡದ ವೀರಕ್ತಮಠದ ಶ್ರೀ ಚನ್ನಬಸವ  ಶಿವಯೋಗಿಗಳವರ ಮೆಚ್ಚುಗೆ

ಹರಪನಹಳ್ಳಿ, ಏ.21- ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು, ದಕ್ಷ ಅಧಿಕಾರಿಯಾಗಿ, ಶಿಸ್ತು ಸಂಸ್ಕಾರಯುತ ಬದುಕು ನಡೆಸಿದ ಕೆ. ಶಿವರಾಮ್ ಅವರ ಆದರ್ಶವನ್ನು ತಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ನಿಲಗುಂದದ ಗುಡ್ಡದ ವೀರಕ್ತಮಠದ ಶ್ರೀ ಚನ್ನಬಸವ  ಶಿವಯೋಗಿಗಳು ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಇತ್ತಿಚೇಗೆ ಕೆ. ಶಿವರಾಮ್‌ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ `ನುಡಿ ನಮನ’ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ದಲಿತ ಮತ್ತು ಬಡವರ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬುದೇ ಅವರ ಧ್ಯೇಯವಾಗಿತ್ತು. ಈ ನಿಟ್ಟಿನಲ್ಲಿ ಅವರು,  ಸರ್ಕಾರಿ ಯೋಜನೆಗಳನ್ನು ದೊರಕಿಸುವ ಜತೆಗೆ ವೈಯಕ್ತಿಕ ಸಹಾಯಯೂ ಮಾಡುತ್ತಿದ್ದರು.

ವಿಜಯನಗರದ  ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಬಣ್ಣದ ಮನೆ ಸೋಮಶೇಖರ್ ಮಾತನಾಡಿ, ಕೆ.ಶಿವರಾಮ್‌ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಆದರೆ ಪಕ್ಷದಿಂದ ಟಿಕೆಟ್ ಲಭಿಸದೇ ಇದ್ದರೂ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರು. ಜನಸೇವೆ ಮಾಡುವ ಉದ್ದೇಶದಿಂದ ಛಲವಾದಿ ಮಹಾಸಭಾ ಸ್ಥಾಪಿಸಿದ್ದರು ಎಂದು ನೆನಪಿಸಿಕೊಂಡರು.

ಶ್ರೀ ಶರಣ ಬಸವ ಬುದ್ಧ ಭೀಮಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೊಟ್ರಪ್ಪ  ಮಾತನಾಡಿ, ಶಿವರಾಮ್‌ ಅವರು ತಳ ಸಮುದಾಯ ಮತ್ತು ಶೋಷಿತ ವರ್ಗಗಳ ಸಮಸ್ಯೆ ಪರಿಹರಿಸಲು ಹೆಚ್ಚಿನ ಶ್ರಮ ಹಾಕುತ್ತಿದ್ದರು. ಮತ್ತು ಛಲವಾದಿ ಸಮಾಜವನ್ನು ಸದೃಢವಾಗಿ ಕಟ್ಟಲು ರಾಜ್ಯದಲ್ಲಿ ಸಂಚಾರ ನಡೆಸಿದ್ದರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ  ಮಾತನಾಡಿ,  ಶಿವರಾಮ್  ಅವರು  ಅಧಿಕಾರಿಯಾಗಿದ್ದರೂ ಯಾವ ರಾಜಕಾರಣಿ ಮತ್ತು ಸಚಿವರ ಮರ್ಜಿಗೆ ಒಳಗಾಗದೆ ದಲಿತರ ಪರವಾಗಿ ಕೆಲಸ ಮಾಡಿದರು. ದಲಿತರು ಅವರನ್ನು ಪ್ರೀತಿಸುತ್ತಿದ್ದರು. ಆದರೆ, ದಲಿತ ರಾಜಕೀಯ ನಾಯಕರು ಇವರನ್ನು ವಿರೋಧಿಸುತ್ತಿದ್ದರು ಎಂದರು.

ಅಂಬೇಡ್ಕರ್ ಸಮಾಜದ ತಾಲ್ಲೂಕು ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ, ಉಪನ್ಯಾಸಕ ಅಜ್ಜಯ್ಯ, ಶಿಕ್ಷಕ ಅರ್ಜುನ್, ಪರಸಪ್ಪ, ಮುಖ್ಯ ಶಿಕ್ಷಕ ಸಹದೇವ, ಬುಡ್ಗ ಜಂಗಮ ಸಮಾಜದ ಜಿಲ್ಲಾ ಅಧ್ಯಕ್ಷ ಸಣ್ಣ ಅಜ್ಜಯ್ಯ, ಹಗರಿಬೊಮ್ಮನಹಳ್ಳಿ ಛಲವಾದಿ ಮಹಾಸಭಾದ ಅಧ್ಯಕ್ಷ ಗಾಳಿ ಬಸವರಾಜ, ನಿಸರ್ಗ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕಲ್ಯಾಣದವರ್, ಶಿಕ್ಷಕ ಬಸವರಾಜ, ಶ್ರೀ ಶರಣ ಬಸವ ಬುದ್ಧ  ಭೀಮಜೀ ವಿದ್ಯಾಸಂಸ್ಥೆಯ ಸಂಸ್ಥಾಪಕ  ಕಾರ್ಯದರ್ಶಿ ಕೊಟ್ರಮ್ಮ, ಮುಖಂಡರಾದ ಮುತ್ತಿಗಿ ಮಲ್ಲಿಕಾರ್ಜುನ್, ಮತ್ತಿಹಳ್ಳಿ ಕೆಂಚಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಮ್ಮ, ನಿಟ್ಟೂರು ನಾಗರಾಜ, ಮರಿಯಮ್ಮನಹಳ್ಳಿ ಮಂಜಣ್ಣ ಮತ್ತು ಇತರರು ಇದ್ದರು.

error: Content is protected !!