ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳಿ

ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳಿ

ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಆರ್.ಬಿ. ವಸಂತಕುಮಾರಿ ಕರೆ

ದಾವಣಗೆರೆ, ಜ.8- ವೈಜ್ಞಾನಿಕ ಅನ್ವೇಷಣೆಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ನಿರಂತರವಾಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕರಾದ ಆರ್.ಬಿ. ವಸಂತಕುಮಾರಿ ಹೇಳಿದರು.

ಅವರು, ಇಂದು ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 30ನೇ ದಾವಣಗೆರೆ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ -2023 ಉದ್ಘಾಟಿಸಿ ಮಾತನಾಡಿದರು.

ವೈಜ್ಞಾನಿಕ ಅನ್ವೇಷಣೆಗಳ ವಿಚಾರಗಳು ಕೇವಲ ಸ್ಪರ್ಧೆಗೆ ಹಾಗೂ ವಿದ್ಯಾರ್ಥಿ ಜೀವನಕ್ಕೆ ಸೀಮಿತವಾಗದೆ ಜೀವನದುದ್ದಕ್ಕೂ ತೊಡಗಿಸಿಕೊಳ್ಳಬೇಕು ಎಂದರಲ್ಲದೆ, ಇಲ್ಲಿ ಮಂಡನೆ ಆಗುವಂತಹ ವೈಜ್ಞಾನಿಕ ಚಿಂತನೆಗಳು ಎಲ್ಲವೂ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಲಿ ಎಂದು ಆಶಿಸಿದರು.

ಡಾ. ಎ.ಟಿ. ಪ್ರೇರಣಾ ಮಾತನಾಡಿ, ವಿಜ್ಞಾನ ಅಂದರೆ ಕೇವಲ ಪುಸ್ತಕದಿಂದ ಓದು, ಜ್ಞಾನ ಸಂಪಾದನೆ ಮಾಡುವುದಲ್ಲ. ಓದಿದ್ದನ್ನು ಅರಿತು ಅಳವಡಿಸಿಕೊಂಡು ಪ್ರಯೋಗಗಳನ್ನು ಮಾಡುವುದಾಗಿದೆ. ವಿದ್ಯಾರ್ಥಿಗಳು ನಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ ಅಲ್ಲಿರುವ  ಸಮಸ್ಯೆಯನ್ನು ಬಗೆಹರಿಸುವಂತಹ ಅನ್ವೇಷಣೆ ಮಾಡಬೇಕು. ವಿದ್ಯಾರ್ಥಿಗಳು ಇಂತಹ ವಿಜ್ಞಾನ ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವಾಧ್ಯಕ್ಷ ಡಾ. ಜೆ.ಬಿ. ರಾಜ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ವಿಜ್ಞಾನದ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದು ಮುಖ್ಯವಲ್ಲ. ಇಲ್ಲಿ ಮಂಡನೆ ಆಗುವ ವಿಷಯ ಸಮಾಜದಲ್ಲಿ ಉಪಯೋಗವಾಗುವಂತೆ ಇರಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಖಜಾಂಚಿ ಅಂಗಡಿ ಸಂಗಮೇಶ್, ಮಕ್ಕಳಲ್ಲಿ ವೈಜ್ಞಾನಿಕ ವಿಚಾರಗಳ ಬಗ್ಗೆ ಆಸಕ್ತಿ ಮೂಡಿಸುವುದಕ್ಕಾಗಿ  ಈ ಸಮ್ಮೇಳನವನ್ನು 1993 ರಿಂದಲೂ ನಗರದಲ್ಲಿ  ಮಾಡಲಾಗುತ್ತಿದೆ. ಕಳೆದ 30 ವರ್ಷಗಳಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಹಾಗೂ  ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದು ಹೇಳಿದರು.

ಸಮ್ಮೇಳನದಲ್ಲಿ 28 ಶಾಲೆಗಳಿಂದ ಆಗಮಿಸಿದ್ದು, 13 ಗ್ರಾಮೀಣ 15  ನಗರ ಪ್ರದೇಶದ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ತಂಡಗಳ ಪೈಕಿ 10 ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡವು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹ ಕಾರ್ಯದರ್ಶಿ ಡಾ. ಎಂ.ಆರ್. ಜಗದೀಶ್, ಜಿಲ್ಲಾ ಸಂಯೋಜಕ ಕೆ. ಸಿದ್ದೇಶ್ ಸೇರಿದಂತೆ ಇತರರು ಇದ್ದರು. ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧ ಸ್ವಾಮಿ ಸ್ವಾಗತಿಸಿದರು.

error: Content is protected !!