ಸಾಧನೆಯ ಗುರಿಯೊಂದಿಗೆ ಈಗಿನಿಂದಲೇ ಶ್ರಮ ವಹಿಸಿ

ಸಾಧನೆಯ ಗುರಿಯೊಂದಿಗೆ ಈಗಿನಿಂದಲೇ ಶ್ರಮ ವಹಿಸಿ

ವಿಜ್ಞಾನ ಅಕಾಡೆಮಿಯ ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್

ದಾವಣಗೆರೆ, ಜ. 8- ಉದ್ಯೋಗ ಹಾಗೂ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಮೂಲ. ಸಾಧನೆಯ ಗುರಿ ಇಟ್ಟುಕೊಂಡು, ಈಗಿನಿಂದಲೇ ಶ್ರಮವಹಿಸಿದರೆ ಯಶಸ್ಸು ಸಾಧ್ಯ ಎಂದು `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಹೇಳಿದರು.

ವಿಜ್ಞಾನ ಅಕಾಡೆಮಿ ವತಿಯಿಂದ ನಗರದ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೆ ಇಂತಹದ್ದೇ ಉದ್ಯೋಗಕ್ಕಾಗಿ ಶಿಕ್ಷಣ ಎನ್ನುವ ಮನಸ್ಥಿತಿ ಇರಲಿಲ್ಲ. ಪದವಿ ಪಡೆಯುವುದೇ ವಿದ್ಯಾರ್ಥಿಗಳ ಗುರಿಯಾಗಿತ್ತು. ಆದರೆ, ಪ್ರಸ್ತುತ ಸ್ಪರ್ಧಾತ್ಮಕ ದಿನಗಳಲ್ಲಿ ಏನು ಓದಿದರೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ಕರಾರುವಾಕ್ಕಾದ ಮಾರ್ಗದರ್ಶನದ ಜೊತೆ, ಶಿಕ್ಷಣವನ್ನೂ ನೀಡಿ, ತಾವು ಅಂದುಕೊಂಡ ಗುರಿ ತಲುಪಲು ಸಾಕಷ್ಟು ಸೌಲಭ್ಯಗಳಿವೆ ಸದ್ಭಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸೂಕ್ತ ಸಂದರ್ಭದಲ್ಲಿ ವಿದ್ಯಾರ್ಥಿಯಲ್ಲಿನ ಜ್ಞಾನ ಹೊರ ತೆಗೆದು ವೇದಿಕೆ ಕಲ್ಪಿಸಿದರೆ ಆ ವಿದ್ಯಾರ್ಥಿ ಮೆರಿಟ್ ಪಡೆಯಲು ಸಾಧ್ಯವಿದೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮಗೆ ಸಿಗುವ ತರಬೇತಿ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು  ಎಂದು ಹೇಳಿದರು.

ನೇತ್ರ ತಜ್ಞ ಡಾ.ಹೆಚ್.ಎಂ. ರವೀಂದ್ರನಾಥ್ ಮಾತನಾಡಿ, ವಿದ್ಯಾರ್ಥಿಯ ಯಶಸ್ಸಿಗೆ ಶ್ರಮ, ಮಾರ್ಗದರ್ಶನ ಹಾಗೂ ಅವಕಾಶಗಳ ಸದ್ಭಳಕೆ ಅತಿ ಮುಖ್ಯ. ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಬಳಸಿಕೊಳ್ಳುವುದು ಮುಖ್ಯ. ಪ್ರತಿ ದಿನವೂ ಒಂದು ರೂಪಾಯಿ ಕೂಡಿಟ್ಟರೆ ಹಲವು ವರ್ಷಗಳ ನಂತರ ಅದು ಲಕ್ಷ ರೂಪಾಯಿಯಾಗಲು ಸಾಧ್ಯ. ಅದರಂತೆಯೇ ನಿತ್ಯವೂ ಶ್ರಮ ವಹಿಸಿದರೆ ಫಲ ದೊಡ್ಡದಾಗಿರುತ್ತದೆ ಎಂದು ಹೇಳಿದರು.

ತಂತ್ರಜ್ಞಾನದ ಫಲವಾಗಿ ಸಾಕಷ್ಟು ಮಾಹಿತಿಗಳು ವಿದ್ಯಾರ್ಥಿಗಳಿಗೆ ಲಭ್ಯವಿವೆ. ಆದರೆ ಅದರಲ್ಲಿ ಓದಬೇಕಾದದ್ದು ಯಾವುದು? ಓದ ಬಾರದ್ದು ಯಾವುದು ಎಂಬುದರ ಬಗ್ಗೆ ಮಾರ್ಗದರ್ಶನ ಮುಖ್ಯ. ಹಾರ್ಡ್ ವರ್ಕ್‌ ಜೊತೆ ಸ್ಮಾರ್ಟ್ ವರ್ಕ್‌ ಸಹ ಇರಬೇಕು. ಅದನ್ನು ವಿಜ್ಞಾನ ಅಕಾಡೆಮಿಯ ಉಪನ್ಯಾಸಕರು ನೀಡುತ್ತಿದ್ದಾರೆ ಎಂದರು.

ಶೇ.2.5ರಷ್ಟು ಅತಿ ಬುದ್ದಿವಂತರು, ಶೇ.2.5ರಷ್ಟು ಅತಿ ದಡ್ಡರಿದ್ದಾರೆ. ಉಳಿದ ಶೇ.95ರಷ್ಟು ಜನರ ಬುದ್ದಿಮತ್ತೆ ಒಂದೇ ರೀತಿಯದ್ದಾಗಿರುತ್ತದೆ. ಕೀಳರಿಮೆ ಬಿಟ್ಟು ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬ ಮಾರ್ಗದರ್ಶನದ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ವಿಜ್ಞಾನ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಸಂಜಯ್ ಗೌಡರ್, ಚಿತ್ರನಟ ಯಶ್  ಹಾಗೂ  ಹತ್ತನೇ ತರಗತಿ ಓದಿದ್ದ ತಮಿಳು ನಾಡಿನ ಮಹಿಳೆ ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಹಿರಿಯ ಪೊಲೀಸ್ ಅಧಿಕಾರಿಯಾದ ಉದಾಹರಣೆಗಳನ್ನು ವಿವರಿಸಿ, ಪ್ರತಿ ವ್ಯಕ್ತಿಯ ಯಶಸ್ಸಿನ ಹಾದಿ ಕಠಿಣವಾಗಿರುತ್ತದೆ. ಗುರಿ ಸಾಧಿಸುವ ಛಲ ಇರಬೇಕು ಎಂದರು.

ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಆವಿಷ್ಕಾರದ ಕೊರತೆ ಎದುರಿಸುತ್ತಿದೆ. ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ನಮ್ಮ ದೇಶದ ಒಬ್ಬರೂ ನೋಬೆಲ್ ಪ್ರಶಸ್ತಿ ಪಡೆದಿಲ್ಲ. ಆ ಕೊರತೆಯನ್ನು ವಿದ್ಯಾರ್ಥಿಗಳು ನೀಗಿಸಲಿ ಎಂದು ಆಶಿಸಿದರು.

ಅಕಾಡೆಮಿಯ ಕಾರ್ಯದರ್ಶಿ ಸಂತೋಷ್ ಕುಮಾರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಪಡೆದು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಾದ ಎಂ.ಟಿ. ಕಾರ್ತಿಕ್, ಎಸ್.ಮಮತಾ, ಯು.ರವಿಕುಮಾರ್, ಸ್ಪಂದನ ಜೆ. ಕಬ್ಬೂರು ತಮ್ಮ  ಅನುಭವ  ಹಂಚಿಕೊಂಡರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.  

ಸಹಾಯಕ ಪ್ರಾಧ್ಯಾಪಕ ಸತೀಶ್, ಉಪನ್ಯಾಸಕ ಭುವನ್ ಉಪಸ್ಥಿತರಿದ್ದರು. ಕಲ್ಪನಾ ಹಾಗೂ ನಂದಿ ಸಹನಾ ನಿರೂಪಿಸಿದರು. ಕೆ.ಸೃಷ್ಠಿ ಪ್ರಾರ್ಥಿಸಿದರು. ಬಿ.ಅಭಿನಯ ಸ್ವಾಗತಿಸಿದರು. 

error: Content is protected !!