ಕೋಟೆನಾಡಿನಲ್ಲಿ ಪರಿಶಿಷ್ಟರ ಪರ ಕಾಂಗ್ರೆಸ್ ಬದ್ಧತೆ

ಕೋಟೆನಾಡಿನಲ್ಲಿ ಪರಿಶಿಷ್ಟರ ಪರ ಕಾಂಗ್ರೆಸ್ ಬದ್ಧತೆ

ಚಿತ್ರದುರ್ಗ, ಜ. 8 – ಪರಿಶಿಷ್ಟರ ಮೀಸಲಾತಿ ಹೆಚ್ಚಳನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸುವಂತೆ ಒತ್ತಾಯಿಸಿರುವ ಕಾಂಗ್ರೆಸ್, ತನ್ನ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮೊದಲ ಅಧಿವೇಶನದಲ್ಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಮಂಡಿಸುವುದಾಗಿ ಘೋಷಿಸಿದೆ.

ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಐಕ್ಯತಾ ಸಮಾವೇಶದಲ್ಲಿ ಈ ಬಗ್ಗೆ ಬದ್ಧತೆ ವ್ಯಕ್ತಪಡಿ ಸಿರುವ ಕಾಂಗ್ರೆಸ್, ಸಂವಿಧಾನಕ್ಕೆ ತಿದ್ದುಪಡಿ ತರಲು ಬಿಜೆಪಿ ಮುಂದಾದರೆ ದೊಡ್ಡ ಆಂದೋ ಲನವೇ ಆಗಲಿದೆ ಎಂದು ಎಚ್ಚರಿಕೆ ನೀಡಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಹಲವಾರು ಕಾಂಗ್ರೆಸ್ ನಾಯಕರು, ಬಿಜೆಪಿಯನ್ನು ದಲಿತ ವಿರೋಧಿ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಪರಿಶಿಷ್ಟ ಸಮುದಾಯದವರು ಛಿದ್ರವಾದರೆ ನಿಮ್ಮನ್ನು ಯಾರೂ ಕೇಳುವವರು ಇರುವುದಿಲ್ಲ. ನಿಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಬ್ರಿಟೀಷರಂತೆ ತುಂಡು ತುಂಡಾಗಿ ವಿಭಜಿಸಿ ಒಡೆದು ಆಳುತ್ತಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾತನಾಡಿ, ಎಲ್ಲ ಶೋಷಿತ ವರ್ಗಗಳು, ಅವಕಾಶ ವಂಚಿತ ವರ್ಗಗಳು ಹಾಗೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಜನ ಒಗ್ಗೂಡಿ ಇಂದು ಹೋರಾಟ ಮಾಡ ಬೇಕಾದ ಅಗತ್ಯವಿದೆ. ಕಾಂಗ್ರೆಸ್ ಯಾವತ್ತಿಗೂ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ, ಬದ್ಧತೆ ಇರುವ ಪಕ್ಷ ಎಂದು ಹೇಳಿದರು.

2020ರ ಫೆಬ್ರವರಿಯಲ್ಲಿಯೇ ನಾಗ ಮೋಹನ ದಾಸ್ ಆಯೋಗ ವರದಿ ನೀಡಿ ದ್ದರೂ ಬಿಜೆಪಿ ಸರ್ಕಾರ 3 ವರ್ಷ ನಿದ್ದೆಯಲ್ಲಿತ್ತು. ಈಗ ಚುನಾವಣೆ ಸಮೀಪಿಸಿದಾಗ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಜನವರಿ 31ರ ಒಳಗಾಗಿ ಸಂವಿಧಾನ ತಿದ್ದುಪಡಿ ತಂದು ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಪರಿಶಿಷ್ಟರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದವರು ಎಚ್ಚರಿಸಿದರು.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮಾಜದವರು ಅಧಿಕಾರಕ್ಕೆ ಬಂದಂತೆ. ಐಕ್ಯತಾ ಸಮಾವೇಶ, ಇಡೀ ದೇಶಕ್ಕೆ ಈ ಸಂದೇಶ ರವಾನಿಸುತ್ತಿದೆ ಎಂದರು.

ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಇಂದು ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಅವರ ಸೂತ್ರಧಾರರಾದ ಆರ್‌ಎಸ್ಎಸ್‌ನವರಿಗೆ ‘ಸಂವಿಧಾನಕ್ಕೆ ಕೈ ಹಾಕಿದರೆ ಭಸ್ಮವಾಗುತ್ತೀರ’ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ,  ದೆಹಲಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ದಲಿತ ವಿರೋಧಿಗಳು. ಆರ್‌ಎಸ್ಎಸ್  ಹಾಗೂ ಸಂಘ ಪರಿವಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ನೀವು ಈ ಎಲ್ಲಾ ದೇಶ ವಿರೋಧಿ ಕೃತ್ಯಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ ಮಾತನಾಡಿ, ನಮ್ಮ ಸರ್ಕಾರ ಬಂದ ಮೊದಲ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುವುದು ಎಂದರು.

ಸಮಾವೇಶದಲ್ಲಿ ಪರಿಶಿಷ್ಟ ಸಮುದಾಯಕ್ಕಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ದಶ ಘೋಷಣೆ ಮಾಡಲಾಯಿತು. ನಾಗಮೋಹನ್ ದಾಸ್ ವರದಿ 9ನೇ ಷೆಡ್ಯೂಲ್‌ಗೆ ಸೇರ್ಪಡೆ, ಸದಾಶಿವ ಆಯೋಗದ ವರದಿ ಮಂಡನೆ, ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಗೆ ತಿದ್ದುಪಡಿ, ಪಿ.ಟಿ.ಸಿ.ಎಲ್. ಕಾಯ್ದೆಗೆ ತಿದ್ದುಪಡಿ, ವಸತಿ ರಹಿತ ಕುಟುಂಬಗಳಿಗೆ ಮನೆಗಳ ನಿರ್ಮಾಣ ಸೇರಿದಂತೆ ಹಲವಾರು ವಿಷಯಗಳನ್ನು ದಶ ಘೋಷಣೆಯಲ್ಲಿ ಪ್ರಸ್ತಾಪಿಸಲಾಗಿದೆ.

error: Content is protected !!