ಜವಾಬ್ದಾರಿ ನಿರ್ವಹಣೆಗೆ ಭಕ್ತರ ಸಹಕಾರ ಅಗತ್ಯ: ಬಸವಪ್ರಭು ಶ್ರೀ

ಜವಾಬ್ದಾರಿ ನಿರ್ವಹಣೆಗೆ ಭಕ್ತರ ಸಹಕಾರ ಅಗತ್ಯ: ಬಸವಪ್ರಭು ಶ್ರೀ - Janathavaniಚಿತ್ರದುರ್ಗ, ಮೇ 29- ಮುರುಘಾ ಮಠಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ ಕ್ರಮವನ್ನು ಪ್ರಶ್ನಿಸಿ, ಹೈಕೋರ್ಟ್‌ ಮೆಟ್ಟಿಲೇರಿದ್ದೆವು. ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಶಿವಮೂರ್ತಿ ಶರಣರು ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತೇನೆ. ಇದಕ್ಕೆ ಭಕ್ತರ ಸಹಕಾರ ಅಗತ್ಯವಿದೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.

ಮುರುಘಾ ಮಠದ ಉಸ್ತುವಾರಿಯನ್ನು ಶ್ರೀ ಬಸವ ಪ್ರಭು ಸ್ವಾಮೀಜಿ ಅವರಿಗೆ ನೀಡಿ, ತಾತ್ಕಾಲಿಕ ಆಡಳಿತ ಸಮಿತಿ ರಚಿಸಲು ಭಾನುವಾರ ನಡೆದ ಭಕ್ತರ ಸಭೆಯು ಒಮ್ಮತದ ತೀರ್ಮಾನದ ನಂತರ ಅವರು ಮಾತನಾಡಿದರು.

ನ್ಯಾಯಾಲಯದ ಆದೇಶದಂತೆ ಸಭೆ ನಡೆಸಲಾಗಿದೆ. ತಾತ್ಕಾಲಿಕ ಆಡಳಿತ ಸಮಿತಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಪೂಜಾ ಕೈಂಕರ್ಯ ಹಾಗೂ ಆಡಳಿತವನ್ನು ಬಸವಪ್ರಭು ಸ್ವಾಮೀಜಿ ಅವರೇ ನೋಡಿಕೊಳ್ಳುತ್ತಾರೆ ಎಂದು ಶಾಸಕ ಕೆ.ಸಿ.ವೀರೇಂದ್ರ ತಿಳಿಸಿದರು.

ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಶರಣರು ಮಠದ ಉಸ್ತುವಾರಿಯನ್ನು ಕಾನೂನು ಬದ್ಧವಾಗಿ ಬಸವಪ್ರಭು ಸ್ವಾಮೀಜಿ ಅವರಿಗೆ ನೀಡಿದ್ದರು. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದರಿಂದ ಸ್ವಾಮೀಜಿ  ಧಾರ್ಮಿಕ ಕೈಂಕರ್ಯಗಳಿಗೆ ಸೀಮಿತವಾಗಿದ್ದರು.

ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದನ್ನು ರದ್ದುಪಡಿಸಿದ್ದ ಹೈಕೋರ್ಟ್‌, ಆಡಳಿತ ಸಮಿತಿ ರಚನೆಗೆ ಸೂಚನೆ ನೀಡಿತ್ತು. ಆಡಳಿತ ಸಮಿತಿಯ ಸ್ವರೂಪ ಹಾಗೂ ಪದಾಧಿಕಾರಿಗಳ ಹೆಸರನ್ನು ಶೀಘ್ರವೇ ಹೈಕೋರ್ಟ್‌ಗೆ ಸಲ್ಲಿಸಲು ಸಭೆ ನಿರ್ಧರಿಸಿತು.

ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ್‌, ಕಾಂಗ್ರೆಸ್‌ ಮುಖಂಡ ಎಚ್‌.ಎ.ಷಣ್ಮುಖಪ್ಪ, ಜೆಡಿಎಸ್‌ ಮುಖಂಡ ಬಿ.ಕಾಂತರಾಜ್‌ ಇದ್ದರು.

error: Content is protected !!