ಸಿಕ್ಕಿರುವ `ಭಾಗ್ಯಗಳನ್ನು’ ಅವಶ್ಯಕತೆಗೆ ಅನುಗುಣವಾಗಿ ಬಳಸಬೇಕಾಗಿದೆ..

ಮಾನ್ಯರೇ,

ರಾಜ್ಯದಲ್ಲಿ ನೂತನ ಸರ್ಕಾರ ನುಡಿದಂತೆ ನಡೆದು ತನ್ನ ಐತಿಹಾಸಿಕ ಐದು ಭಾಗ್ಯಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಎಲ್ಲಾ ಭಾಗಗಳಿಂದ ವಿಶೇಷವಾಗಿ ಚರ್ಚೆಗೆ ಒಳಪಟ್ಟಿದ್ದು ಗೃಹಜ್ಯೋತಿ ಭಾಗ್ಯ ಸಾಮಾಜಿಕ ಜಾಲತಾಣಗಳಲ್ಲಿ ಗೃಹಿಣಿಯರು, ಸಾರ್ವಜನಿಕರು ವಿದ್ಯುತ್ ಶುಲ್ಕ ಪಾವತಿಸುವುದಿಲ್ಲ ಎನ್ನುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಹಲವು ಉದ್ದೇಶಪೂರ್ವಕವಾಗಿ ಮಾಡಿದ್ದಿರಬಹುದು.

ವಿಷಯ ಅದಲ್ಲ, ಸರ್ಕಾರ ಗೃಹಜ್ಯೋತಿ ಯೋಜನೆ ಅಡಿ ಬಿಪಿಎಲ್ ಕುಟುಂಬದವರಿಗೆ 200 ಯೂನಿಟ್ ವಿದ್ಯುತ್ತನ್ನು ಬಡವರಿಗೆ ಅನುಕೂಲವಾಗಲಿ   ಎಂದು ಉಚಿತವಾಗಿ ನೀಡಿದೆ, ಆದರೆ ಅದು ದುರುಪಯೋಗವಾಗಬಾರದು, ಮಾರುಕಟ್ಟೆಯಲ್ಲಿ ದಿಢೀರನೆ ವಿದ್ಯುತ್ ಉಪಕರಣಗಳ ಮಾರಾಟ ದುಪ್ಪಟ್ಟಾಗಿದೆ. ಅವಶ್ಯಕತೆ ಇದೆಯೋ ಇಲ್ಲವೋ ಉತ್ತಮ ಗುಣಮಟ್ಟದ್ದು ಹೌದೋ, ಅಲ್ಲವೋ ಯಾವುದನ್ನೂ ಲೆಕ್ಕಿಸದೆ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಗಾಗಿ ಮುಗಿಬಿದ್ದಿದ್ದಾರೆ. 

ಬಹಳಷ್ಟು ಬಿಪಿಎಲ್ ಕುಟುಂಬಗಳು 75 ಯೂನಿಟ್ 100 ಯೂನಿಟ್ 150 ಯೂನಿಟ್ ವಿದ್ಯುತ್ತನ್ನು ಬಳಸುತ್ತಿವೆ. ಆದರೆ 200 ಯೂನಿಟ್ ಉಚಿತ ಎನ್ನುವ ಕಾರಣಕ್ಕಾಗಿ ಹೆಚ್ಚು ವಿದ್ಯುತ್ತನ್ನು ಬಳಸಲಾರಂಭಿಸಿದರೆ ಅದು ರೂಢಿಯಾಗುತ್ತದೆ. ಈ ಭಾಗ್ಯ ಎಷ್ಟು ವರ್ಷಗಳು ಇರುತ್ತವೆಯೋ ಇನ್ನು ಸ್ಪಷ್ಟವಾಗಿ ತಿಳಿದಿಲ್ಲ ಹಾಗೂ ಮುಂಬರುವ ಸರ್ಕಾರಗಳು ಈ ಭಾಗ್ಯಗಳನ್ನು ಮುಂದುವರೆಸುತ್ತವೆಯೋ, ಇಲ್ಲವೋ ಯಾರಿಗೂ ತಿಳಿಯದು. ಆದ್ದರಿಂದ ಸಿಕ್ಕಿರುವ ಯೋಜನೆಗಳನ್ನು ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಬೇಕಾಗಿದೆ.


– ಹೆಲ್ಪ್‌ಲೈನ್ ಸುಭಾನ್, ದಾವಣಗೆರೆ.

error: Content is protected !!