ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ

ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ

ದಾವಣಗೆರೆ, ಮಾ.28-   ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ಸ್‌ನ ಜಿಲ್ಲಾ ಸಮಿತಿ ವತಿಯಿಂದ   ನಗರದ  ಕಾರ್ಮಿಕ ಇಲಾಖೆಯ ಮುಂದೆ ಇಂದು ಪ್ರತಿಭಟನೆ ಮಾಡಿ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಮಿತಿಯು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿತ್ತು.    ಕಾರ್ಮಿಕರ ಮಕ್ಕಳಿಗೆ  ಶೈಕ್ಷಣಿಕ ಅರ್ಜಿ ಸಲ್ಲಿಸಲು  ಆಗುತ್ತಿರುವ ತೊಂದರೆ ಸರಿಪಡಿಸಬೇಕು.  ಆರೋಗ್ಯ ಸಂಜೀವಿನಿ ಜಾರಿ,  ಹೊಸ ತಂತ್ರಾಂಶ ಕುರಿತು ತರಬೇತಿ,  ವಿವಿಧ ಸಹಾಯ ಧನಕ್ಕಾಗಿ ಕೋರಿ ಸಲ್ಲಿಕೆ ಆಗುತ್ತಿರುವ ಅರ್ಜಿಗಳ ವಿಲೇವಾರಿ ವಿಳಂಬ ಆಗುತ್ತಿರುವುದನ್ನು ತಪ್ಪಿಸುವುದು. ಮಂಡಳಿ ಮತ್ತು ಕಾರ್ಮಿಕ ಇಲಾಖೆಯಲ್ಲಿರುವ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ನೇಮಕಾತಿಗೆ ನಡೆದಿರುವ ಪ್ರಕ್ರಿಯೆಯನ್ನು ಆದಷ್ಟು ತೀವ್ರಗೊಳಿಸಲು ಕ್ರಮವಹಿಸಬೇಕು.

ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ಜಾರಿ ಮಾಡಬೇಕು. ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದೇ ಇರುವುದು ಹಾಗು ಮಂಡಳಿಯ ನಿಯಮಾವಳಿ, ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸುತ್ತಿಲ್ಲ.  ಈಗಾಗಲೇ ನಾವು ಆಕ್ಷೇಪಣೆ ವ್ಯಕ್ತಪಡಿಸಿದ್ದೇವೆ. ಈ ವಿಚಾರದಲ್ಲಿ ಈಗಾಗಲೇ ತನಿಖೆಗೂ ಒತ್ತಾಯಿಸಿದ್ದೇವೆ. ಆದರೂ ಮಂಡಳಿ ನಿರಂತರವಾಗಿ ಖರೀದಿಗಳನ್ನು ಮುಂದುವರೆಸುತ್ತಲೇ ಇದೆ. 

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ 2021ರ ಮಾರ್ಚ್ ನಲ್ಲಿ ನೀಡಿರುವ ಸ್ಪಷ್ಟ ನಿರ್ದೇಶನದಂತೆ   ಫಲಾನುಭವಿಗಳಿಗೆ ನೇರ ಹಣ ಜಮ   ಮಾಡಬೇಕು. ವಸ್ತುಗಳ ರೂಪದಲ್ಲಿ ಪರಿಹಾರ ಸಾಮಗ್ರಿ ನೀಡುವುದನ್ನು ಕೂಡಲೇ ನಿಲ್ಲಿಸಬೇಕು  ಎಂಬಿತ್ಯಾಧಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಸಂಘಟನೆ  ಜಿಲ್ಲಾ ಸಂಚಾಲಕ  ಕೆ.ಹೆಚ್. ಆನಂದ ರಾಜು, ನೇತ್ರಾವತಿ, ಸುಧಾರಾಣಿ, ಪುಷ್ಪಲತಾ ಗಜೇಂದ್ರ, ಹೊನ್ನೂರು ಶಿವಣ್ಣ, ಆಟೋ ಚಾಲಕರ ಸಂಘದ ರಾಜ್ಯ ನಾಯಕ ಶ್ರೀನಿವಾಸಮೂರ್ತಿ ಮತ್ತಿತರರು   ಭಾಗವಹಿಸಿದ್ದರು.

error: Content is protected !!