ಹರಿಹರ: ಮಾಜಿ ಶಾಸಕದ್ವಯರಿಂದ ಅಭಿವೃದ್ಧಿಗೆ ಅಡ್ಡಿ

ಹರಿಹರ: ಮಾಜಿ ಶಾಸಕದ್ವಯರಿಂದ ಅಭಿವೃದ್ಧಿಗೆ ಅಡ್ಡಿ

22 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಸ್. ರಾಮಪ್ಪ

ಹರಿಹರ, ಮಾ.27- ಮಾಜಿ ಶಾಸಕರಾದ ಬಿ.ಪಿ. ಹರೀಶ್ ಮತ್ತು ಹೆಚ್.ಎಸ್.ಶಿವಶಂಕರ್ ಅವರುಗಳು   ನಗರದ  ಅಭಿವೃದ್ಧಿ ಕೆಲಸಕ್ಕೆ  ಅಡ್ಡಿ ಮಾಡುತ್ತಿದ್ದಾರೆ ಎಂದು ಶಾಸಕ ಎಸ್. ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿ ಅವರು ಮಾತನಾಡಿದರು.  

ನಾನು ಏನು ಅಭಿವೃದ್ಧಿ ಮಾಡಿದರೂ ಅದನ್ನು    ಸಹಿಸಿಕೊಳ್ಳಲು ಈ ಮಾಜಿ ಶಾಸಕರಿಗೆ ಆಗುತ್ತಿಲ್ಲ.  ಎಲ್ಲರೂ ಕೈಜೋಡಿಸಿದಾಗ  ಮಾತ್ರ ಅಭಿವೃದ್ಧಿ ಕಾರ್ಯಗಳು ಆಗುವುದಕ್ಕೆ ಸಾಧ್ಯವಾಗುತ್ತದೆ. ಇತ್ತೀಚೆಗೆ  ದರ್ಗಾ ಮುಂಭಾಗದ ರಸ್ತೆಯನ್ನು ದುರಸ್ತಿ ಪಡಿಸಲು ಮುಂದಾದರೆ, ಬಿ.ಪಿ. ಹರೀಶ್ ತಮ್ಮ ಸರ್ಕಾರ ಇದೆ ಎಂದು ರಸ್ತೆಯನ್ನು ದುರಸ್ತಿ ಪಡಿಸಲು ಅಡ್ಡಿಪಡಿಸಿ,  ನಿಲ್ಲಿಸಿದರು.      ಹೆಚ್.ಎಸ್. ಶಿವಶಂಕರ್ ಕೂಡಾ ತೊಟ್ಟಿಲು ತೂಗುವುದು, ಮಗುವನ್ನು  ಚಿವುಟುವಂತಹ ಕೆಲಸ ಮಾಡಿದರು.  ಹೊರವಲಯ ದಲ್ಲಿರುವ 12 ಎಕರೆ ಪ್ರದೇಶದಲ್ಲಿ ಬಡವರಿಗೆ ಸೈಟ್ ಕೊಡುವುದಕ್ಕೆ ಮುಂದಾದರೆ, ಅದಕ್ಕೆ ಕೇಸ್  ಹಾಕಿಸಿದರು.   ನಾನು ಮಾಡಿರುವ ಭ್ರಷ್ಟಾಚಾರವನ್ನು ಹೊರಗಡೆ ತೆಗೆಯುವುದಾಗಿ ಹೇಳಿದ್ದಾರೆ.  ಅವರ ಕಾಲದಲ್ಲಿ ಎಷ್ಟು ಹಗರಣ ಮಾಡಿದರು ಎಂಬುದು ನನಗೂ ಗೊತ್ತಿದೆ, ನಾನೂ ಕೂಡ ಅವುಗಳನ್ನು ಬಹಿರಂಗ ಪಡಿಸುವೆ ಎಂದು ರಾಮಪ್ಪ ಕಿಡಿಕಾರಿದರು.

ನಗರಸಭಾ ಸದಸ್ಯ ಶಂಕರ್ ಖಟಾವ್ಕರ್   ಮಾತನಾಡಿ, ಶಾಸಕ ರಾಮಪ್ಪನವರು ಬಿಜೆಪಿ ಸರ್ಕಾರ ಇದ್ದರೂ, ಬಹಳ ಶ್ರಮ ವಹಿಸಿ,  8 ವಾರ್ಡ್‌ಗಳಲ್ಲಿ ಕಾಮಗಾರಿ ಜೊತೆಗೆ ಹರಿಹರೇಶ್ವರ ದೇವಸ್ಥಾನ ಮುಂಭಾಗದಲ್ಲಿ ವಿದ್ಯುತ್ ದೀಪ ಅಳವಡಿಕೆ ಮತ್ತು ನಗರದ ಹಲವಾರು ಬಡಾವಣೆಗಳ ಮುಖ್ಯರಸ್ತೆಯ ಕಾಮಗಾರಿ  ಮಾಡುವುದಕ್ಕೆ ಮುಂದಾಗಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ನಗರಸಭೆ ಸದಸ್ಯ ವಸಂತಕುಮಾರ್ ಮಾತನಾಡಿ,   ಆಟೋ ಚಾಲಕರು ರಸ್ತೆಯನ್ನು ದುರಸ್ತಿಪಡಿಸಿ ಎಂದು ಹೋರಾಟ ಮಾಡಿದರು. ಇದರಿಂದಾಗಿ ಹಲವಾರು ಬಡಾವಣೆಗಳ ರಸ್ತೆ ಕಾಮಗಾರಿ ಮಾಡುವುದಕ್ಕೆ ಶಾಸಕರು ಮುಂದಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಾಹಿನಾಭಾನು ದಾದಾಪೀರ್,  ನಗರಸಭೆ ಸದಸ್ಯರಾದ  ಎಂ. ಎಸ್. ಬಾಬುಲಾಲ್, ಕೆ.ಜಿ. ಸಿದ್ದೇಶ್, ಅಲಿಂ, ಎಸ್.ಎಂ. ವಸಂತ್, ಕೃಷ್ಣಪ್ಪ ಜಾಡರ್, ವಾಜೀದ್ ಸಾಬ್, ಮುಲ್ಲಾಬಾಬು ಸಾಬ್, ಮುಗ್ದಂ, ತಾಪಂ ಮಾಜಿ ಅಧ್ಯಕ್ಷ ಟಿ. ಮುರುಗೇಶಪ್ಪ, ಇಷಾದರ್, ಕಬೀರ್ ಮೌಲಾನಾ ಸಾಬ್, ಸವಿತಾ ನಾಯ್ಕ್, ಹನುಮಂತ ರೆಡ್ಡಿ, ಜೋತಿ, ವಿದ್ಯಾ ಗಡದ, ಮಾಲಾ, ನೇತ್ರಾವತಿ, ಅಫ್ರೋಜ್ ಖಾನ್, ಜಫ್ರುಲ್, ಇಸ್ಮಾಯಿಲ್, ನಜೀರ್ ಸಾಬ್, ಬಬ್ಲು ಪೈಲ್ವಾನ್, ಆಸೀಫ್ ಪೈಲ್ವಾನ್, ಹುಲಿಕಟ್ಟಿ ನಾಗರಾಜ್, ಇಂಜಿನಿಯರ್ ಅಬ್ದುಲ್ ಹಮೀದ್‌ ಮತ್ತಿತರರು ಹಾಜರಿದ್ದರು.

error: Content is protected !!