ರೈತರ ಹಿತ ಕಾಯಲು ಸಚಿವ ಎಸ್ಸೆಸ್ಸೆಂಗೆ ಮನವಿ

ರೈತರ ಹಿತ ಕಾಯಲು ಸಚಿವ ಎಸ್ಸೆಸ್ಸೆಂಗೆ ಮನವಿ

ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ಘೋಷಿಸಿದ ಜಿಲ್ಲಾ ರೈತ ಸಂಘ

ದಾವಣಗೆರೆ, ಏ. 16- ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದಾವಣಗೆರೆ ಜಿಲ್ಲಾ  ಘಟಕದ ವತಿಯಿಂದ  ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ನೀಡುವುದಾಗಿ ಸೇನೆಯ ಜಿಲ್ಲಾಧ್ಯಕ್ಷ ಹೊಳೆಸಿರಿಗೆರೆ ಹಾಳೂರು ನಾಗರಾಜ್ ತಿಳಿಸಿದರು.

ಸೋಮವಾರ ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು, ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

ಅಪ್ಪರ್ ಭದ್ರಾ ಯೋಜನೆಗೆ ತುಂಗಾದಿಂದ ನೀರು ಲಿಫ್ಟ್ ಮಾಡಿಯೇ ನೀರು ಹರಿಸಬೇಕು. ಭದ್ರಾ ನೀರನ್ನು ಹರಿಸುವುದರಿಂದ ಅಚ್ಚುಕಟ್ಟಿನ ರೈತರಿಗೆ ಬಹಳ ತೊಂದರೆ ಆಗುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನೀವು ಚರ್ಚಿಸಬೇಕು. ಈ ಬಗ್ಗೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ನಮ್ಮ ಜಿಲ್ಲೆಯ ರೈತರ ಹಿತ ಕಾಪಾಡುವ ಕೆಲಸ ಮಾಡಿಲ್ಲ. ನೀವಾದರೂ ಭದ್ರಾ ಅಚ್ಚುಕಟ್ಟಿನ ರೈತರಿಗೆ ನೀರಿನ ತೊಂದರೆ ಆಗದಂತೆ ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಬೇಕು. ನೀರು ಎಲ್ಲರ ಹಕ್ಕು. ಭದ್ರಾ ಮೇಲ್ದಂಡೆ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಜಿಲ್ಲೆಯ ರೈತರನ್ನು ಬಲಿಕೊಟ್ಟು ಆ ಭಾಗಕ್ಕೆ ನೀರು ಹರಿಸುವ ತೀರ್ಮಾನಕ್ಕೆ ನಮ್ಮ ವಿರೋಧ  ಇದೆ ಎಂದು ಅವರು ಹೇಳಿದರು.

ಹರಿಹರ ತಾಲ್ಲೂಕಿನಲ್ಲಿ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಂಡರೆ ಕೊನೆ ಭಾಗದ ರೈತರಿಗೆ ಅನುಕೂಲವಾಗಲಿದೆ. ಮತ್ತು ತುಂಗಭದ್ರಾ ನದಿಯಿಂದ ಹರಿಹರ ತಾಲ್ಲೂಕು ಸೇರಿದಂತೆ ಜಿಲ್ಲೆಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಬೇಕೆಂದು ಹಾಳೂರು ನಾಗರಾಜ್ ಅವರು ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವ ಮಲ್ಲಿಕಾರ್ಜುನ್ ಅವರು ಚುನಾವಣೆ ನಂತರ ಭದ್ರಾ ಅಚ್ಚುಕಟ್ಟಿನ ರೈತರ ಸಭೆ ನಡೆಸುವುದಾಗಿ ಮತ್ತು ಹರಿಹರ ತಾಲ್ಲೂಕಿನಲ್ಲಿ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಮಟ್ಟದಲ್ಲಿ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ತುಂಗಭದ್ರಾ ನದಿಯಿಂದ ಕೊಂಡಜ್ಜಿ ಕೆರೆ ಸೇರಿದಂತೆ ದಾವಣಗೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೀಘ್ರ ಜಾರಿಗೆ ಬರಲಿದೆ.

ದೇವರ ಬೆಳಕೆರೆ ಪಿಕಪ್ ಡ್ಯಾಂ ಕ್ರಸ್ಟ್ ಗೇಟ್ ಸಮಸ್ಯೆಯನ್ನೂ ಬಗೆಹರಿಸುತ್ತೇನೆಂದು ಸಚಿವರು ರೈತರಿಗೆ ತಿಳಿಸಿದರು.

ರೈತ ಸಂಘದ ಹನಗವಾಡಿ ರುದ್ರಮುನಿ, ತಾ. ಅಧ್ಯಕ್ಷ ಹಲಸಬಾಳು ಬಸವರಾಜಪ್ಪ, ಸುರೇಶಪ್ಪ, ರಾಜನಹಳ್ಳಿ ಪರಶುರಾಮ್, ಶಿವನಹಳ್ಳಿ ಹನುಮಂತಪ್ಪ, ಭಾನುವಳ್ಳಿ ಪರಮೇಶ್ವರಪ್ಪ, ಹನಗವಾಡಿ ಸಿದ್ದಪ್ಪ, ಹಾಲಿವಾಣದ ದೊಡ್ಡಪ್ಪ, ರಂಗಪ್ಪ, ಕೆಂಚನಹಳ್ಳಿ ಶೇಖರಪ್ಪ, ನಾರಪ್ಪ, ಬಾತಿ ಈರಪ್ಪ, ಕುಂಬಳೂರು ಆಂಜನೇಯ, ಹರಿಹರದ ಗೋಪಾಲ್‌ ಪವಾರ್, ಕೊಂಡಜ್ಜಿ ಬಸವರಾಜಪ್ಪ, ಪ್ರಕಾಶಪ್ಪ, ಗೋವಿನಹಾಳ್ ಗದಿಗೆಪ್ಪ, ವಾಸನ ರಂಗಪ್ಪ ಮತ್ತು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹನಗವಾಡಿ ಕುಮಾರ್, ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಹನಗವಾಡಿ ಸಾರಥಿ ಮಂಜುನಾಥ್, ಹರಿಹರ ನಗರಸಭೆ ಸದಸ್ಯ ಎಬಿಎಂ ವಿಜಯಕುಮಾರ್ ಈ ವೇಳೆ ಹಾಜರಿದ್ದರು.

error: Content is protected !!