ದಾವಣಗೆರೆಯಲ್ಲಿರುವುದು ಅಭಿವೃದ್ಧಿಯ ಹವಾ

ದಾವಣಗೆರೆಯಲ್ಲಿರುವುದು ಅಭಿವೃದ್ಧಿಯ ಹವಾ

ಮಾಯಕೊಂಡ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ

ದಾವಣಗೆರೆ, ಏ. 30- ದಾವಣಗೆರೆ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಹವಾನೂ ಇಲ್ಲ. ಅಭಿವೃದ್ಧಿ ಹವಾ ಒಂದೇ ಇರುವುದು ಎಂದು ದಾವ ಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್  ತಿಳಿಸಿದರು.

ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಕತ್ತಲಗೆರೆ, ಕವಳಿ ತಾಂಡ ಕ್ಯಾಂಪ್, ಕಶೆಟ್ಟಿಹಳ್ಳಿ, ಬೆಳಲಗೆರೆ, ಸಂಗಾ ಹಳ್ಳಿ, ಕುರುಬರಹಳ್ಳಿ,  ರೆಡ್ಡಿಹಳ್ಳಿ, ಹರ್ಲಿಪುರ, ಮರಬನಹಳ್ಳಿ, ಕೋಟೆಹಾಳ್, ಹರೋಸಾಗರ, ಸಾಗರಪೇಟೆ, ಬಸವಾಪಟ್ಟಣ, ದಾಗಿನಕಟ್ಟೆ, ಯಲೋದಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಹವಾ ಮಾತ್ರ ದಾವಣಗೆರೆಯಲ್ಲಿದ್ದು, ದಾವಣಗೆರೆಯ ಎರಡೂ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಮುಂದಿನ ದಿನಗಳಲ್ಲಿ ನಾನೂ ಸಹ ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಶಾಸಕರುಗಳ ಸಹಕಾರದೊಂದಿಗೆ ಒತ್ತು ನೀಡಲಿದ್ದೇನೆ ಎಂದರು. 

ದಾವಣಗೆರೆ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳು ಇಡೀ ರಾಜ್ಯಕ್ಕೆ ಮಾದರಿಯಂತೆ ಅಭಿವೃದ್ಧಿ ಆಗಿದ್ದು, ಎಲ್ಲಾ ಕ್ಷೇತ್ರಕ್ಕೂ ಅನುದಾನ ಕಲ್ಪಿಸಲಾಗಿದೆ. ಎಸ್ಸೆಸ್‌, ಎಸ್ಸೆಸ್ಸೆಂ ಅವರುಗಳು ಅಭಿವೃದ್ಧಿ ಮಾಡದಿದ್ದರೆ ಸಂಸದರನ್ನು ನೆಚ್ಚಿ ಕುಳಿತಿದ್ದರೆ ಜನರು ಸಂಕಷ್ಟ ಪರಿಸ್ಥಿತಿ ಅನುಭವಿಸಬೇಕಾಗುತ್ತಿತ್ತು. ಇಂತಹ ಸಂಸದರನ್ನು ಮನೆಗೆ ಕಳುಹಿಸಬೇಕಿದೆ ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದಂತೆ ಸರ್ಕಾರ ಬಂದ ತಕ್ಷಣ ಐದು ಯೋಜನೆಗಳನ್ನು ಜಾರಿಗೆ ತಂದು ಇಂದು ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.110 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.

ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯ ದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯ ದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು  ಸೇರಿದಂತೆ ಹಲವು ಯೋಜನೆ ಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.

error: Content is protected !!