ನಗರದಲ್ಲಿ ಇಂದು ಜಿಲ್ಲಾ ಪಂಚಮಸಾಲಿ ಸಮಾಜದ ಸಭೆ

ದಾವಣಗೆರೆ, ಏ.30- ನಾಳೆ ದಿನಾಂಕ 1ರ ಬುಧವಾರ ನಗರದ ಬಂಟರ ಭವನದಲ್ಲಿ ಜಿಲ್ಲಾ ಪಂಚಮಸಾಲಿ ಸಮಾಜದ ಸಭೆ ಕರೆಯಲಾಗಿದೆ ಎಂದು ಮಾಜಿ ಶಾಸಕ, ಸಮಾಜದ ಮುಖಂಡ ಎಚ್.ಎಸ್. ಶಿವಶಂಕರ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 12 ಗಂಟೆಗೆ ನಡೆಯುವ ಈ ಸಭೆಯನ್ನು ಪಂಚಮಸಾಲಿ ಸಮಾಜ ಬಾಂಧವರಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗಾಗಿ ಆಯೋಜಿಸಲಾಗಿದೆ ಎಂದರು.

ಸಮಾಜದ ಕೆಲ ಸ್ವಾಮೀಜಿಗಳ ಹೇಳಿಕೆಯಿಂದ ಸಮುದಾಯದವರು ದಿಕ್ಕು ತಪ್ಪಬಾರದು ಎಂಬುದನ್ನು ತಿಳಿ ಹೇಳಲು ಮತ್ತು ಸಮಾಜ ಬಾಂಧವರಲ್ಲಿ ಮೂಡಿರುವ ಗೊಂದಲ ಸರಿ ಪಡಿಸಲು  ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ಜಿ. ಅಜಯ್‌ಕುಮಾರ್ ಅಧ್ಯಕ್ಷತೆಯಲ್ಲಿ ಕರೆದಿರುವ ಸಭೆಯನ್ನು ಮಾಜಿ ಕೇಂದ್ರ ಸಚಿವ ಬಸವರಾಜ್ ಪಾಟೀಲ್ ಯತ್ನಾಳ್ ಉದ್ಘಾಟಿಸಲಿದ್ದಾರೆ.  

ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಂದೂ ರಾಜಕೀಯ ರಾಯಭಾರಿಯಂತೆ ವರ್ತಿಸಿಲ್ಲ. ಅವರಿಗೆ ಮಂತ್ರಿ ಸ್ಥಾನ ಕೊಡಬೇಕು. ಇವರಿಗೆ ಬೋರ್ಡ್ ಅಧ್ಯಕ್ಷ ಸ್ಥಾನ ನೀಡಬೇಕೆಂದು ಎಂದೂ ಕೇಳಿಲ್ಲ. ಆದರೆ, ಸಮಾಜದ ಕೆಲ ಮಠಾಧೀಶರು ಲೋಕಸಭೆ ಸೀಟು ಹಂಚಿಕೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾಗಿದ್ದು, ಸಮುದಾಯದ ಜನರು ಬಿಜೆಪಿ ವಿರುದ್ಧ ತೀರ್ಮಾನ ತೆಗೆದುಕೊಳ್ಳಬೇಕೆಂದು ಹೇಳಿಕೆ ನೀಡಿರುವುದರಿಂದ ಗೊಂದಲ ನಿರ್ಮಾಣವಾಗಿದೆ ಎಂದು ಶ್ರೀ ವಚನಾನಂದ ಸ್ವಾಮೀಜಿ ಹೆಸರು ಹೇಳದೆಯೇ ಶಿವಶಂಕರ್ ಅಸಮಾದಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಿ.ಜಿ. ಅಜಯಕುಮಾರ್, ಚಿದಾನಂದಪ್ಪ. ಮೋತಿ ಶಂಕರಪ್ಪ, ಕುಣೆಬೆಳಕೆರೆ ಈಶ್ವರಪ್ಪ, ಎಸ್. ಓಂಕಾರಪ್ಪ, ಎ.ಪಿ. ಗಣೇಶ್, ರುದ್ರೇಶ್, ಪೈಲ್ವಾನ್ ಮಂಜುನಾಥ್, ಡಿ.ಜಿ. ನಂಜಪ್ಪ, ಸಿದ್ದನಗೌಡ್ರು, ಅಡಿಕೆ ಪ್ರೇಮಕುಮಾರ್ ಇದ್ದರು.

error: Content is protected !!