ಹರಿಹರದಲ್ಲಿ ಇಂದು ಪ್ರೊ.ಬಿ. ಕೃಷ್ಣಪ್ಪ ಸಂಸ್ಮರಣೆ, ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನ

ದಾವಣಗೆರೆ, ಏ.30- ಹರಿಹರ ಹೊರವಲಯದ ಪ್ರೊ. ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನ ಮೈತ್ರಿ ವನದಲ್ಲಿ ನಾಳೆ ದಿನಾಂಕ 1ರ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರೊ.ಬಿ. ಕೃಷ್ಣಪ್ಪ ಅವರ ಸಂಸ್ಮರಣೆ, ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಮಾಹಿತಿ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ, ಸಿವಿಜಿ ಬಾಣಗೆರೆ, ಏಕಾಂತಗಿರಿ ಟ್ರಸ್ಟ್ ಹಾಗೂ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದರು.

ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್‌ನ ಇಂದಿರಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸುವರು. ಮೇವಗಲ್ ಸೋಮಶೇಖರ್ ಅವರ `ದಾಂಡಿ ಯಾತ್ರೆ’ ಕೃತಿಯನ್ನು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ, ಇಂದಿರಾ ಕೃಷ್ಣಪ್ಪ ಅವರ `ಮಹಿಳಾ ಚಳವಳಿಯ ಜನನಿ ಸಾವಿತ್ರಿಬಾ ಫುಲೆ’ ಪುಸ್ತಕವನ್ನು  ಹಿಮೊಫಿಲಿಯಾ ಸೊಸೈಟಿಯ ಡಾ. ಸುರೇಶ್ ಹನಗವಾಡಿ, `ಜನಪರ ಚರಿತ್ರೆಯ ಮರುನೋಟ’, `ಫುಲೆ ದಂಪತಿಗಳ ಚಿಂತನಧಾರೆ’ ಮತ್ತು `ಈಶಾವ್ಯಾಸಂ’ ಕೃತಿಗಳನ್ನು ನಿವೃತ್ತ ಪ್ರಾಧ್ಯಾಪಕ ಸಿ.ವಿ. ಪಾಟೀಲ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕೃತಿ ಕುರಿತು ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ, ಸಾಹಿತಿ ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡುವರು. ಪ್ರೊ.ಬಿ. ಕೃಷ್ಣಪ್ಪ ಮತ್ತು ಕರ್ನಾಟಕ ದಲಿತ ಚಳವಳಿ ಕನ್ನಡ ಸಾಹಿತ್ಯ ಮತ್ತು ಪರಿಣಾಮಗಳು ಮಹಾ ಪ್ರಬಂಧದ ಕುರಿತು ಪ್ರಾಧ್ಯಾಪಕ ಡಾ.ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ ಮಾಹಿತಿ ನೀಡುವರು. ಕೃತಿಕಾರರಿಗೆ ಮತ್ತು ಉಪನ್ಯಾಸಕರಿಗೆ ರುದ್ರಪ್ಪ ಹನಗವಾಡಿ ಸನ್ಮಾನಿಸುವರು. ದಲಿತ ಮುಖಂಡ ಮಾವಳ್ಳಿ ಶಂಕರ್, ಚಿತ್ರ ಕಲಾವಿದ ಸಿ.ಚಂದ್ರಶೇಖರ್ ಉಪಸ್ಥಿತರಿರುವರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಳಗದ ಶಿವಕುಮಾರ್ ಮಾಡಾಳ್, ಸತೀಶ್ ಅರವಿಂದ್ ಇದ್ದರು.

error: Content is protected !!