ಬ್ಲಾಕ್‌ಮೇಲ್ ಮೂಲಕ ಮತ ಕೇಳುತ್ತಿರುವ ಕಾಂಗ್ರೆಸ್ : ವಸಂತ್‌ ಕುಮಾರ್‌

ದಾವಣಗೆರೆ, ಏ. 30- ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತ ಕೇಳಲು ಅರ್ಹತೆ ಇಲ್ಲದ ಕಾಂಗ್ರೆಸ್, ಮತದಾರರನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಅನುಸರಿಸುತ್ತಿದೆ. ಆದರೆ, ಅದು ಫಲ ನೀಡುವುದಿಲ್ಲ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ ಕುಮಾರ್ ಆರೋಪಿಸಿದರು.

ನಗರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದಿದ್ದರೆ, ಎಲ್ಲ ಗ್ಯಾಂರಂಟಿಗಳು, ಬಿಪಿಎಲ್ ಕಾರ್ಡ್ ಹಾಗೂ ಸರ್ಕಾರಿ ಸೌಲಭ್ಯಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ಸಿಗರು ಪ್ರಚಾ ರದ ವೇಳೆ ಸಾರ್ವಜನಿಕರನ್ನು ಬೆದರಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅಭ್ಯರ್ಥಿಯು ಸಚಿವ ರಾಗಿರುವ ತಮ್ಮ ಪತಿಯ ಅಧಿಕಾರ ಬಳಸಿಕೊಂಡು, ಸರ್ಕಾರಿ ಅಧಿಕಾರಿ ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿ ದ್ದಾರೆ. ಇತ್ತೀಚೆಗೆ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಆರೋಗ್ಯ ಸಚಿವರ ಭಾವಚಿತ್ರ ಇರುವ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿದ್ದಾರೆ. ಈ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು. ಜೆಡಿಎಸ್ ಕಾನೂನು ಘಟ ಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ,  ನ್ಯಾಯವಾದಿಗಳು ಪ್ರಬುದ್ಧ ಹಾಗೂ ಪ್ರಜ್ಞಾವಂತರಾಗಿದ್ದು, ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಕೊಳೇನಹಳ್ಳಿ ಸತೀಶ್, ಎಚ್.ಎಸ್.ನಿಂಗರಾಜ್, ಕಾಕನೂರು ಮಂಜಣ್ಣ ಹಿರಿಯ ವಕೀಲ ಎಸ್. ದಿವಾಕರ್, ಎಚ್.ಎಸ್. ಯೋಗೇಶ್, ಎಚ್.ಪಿ. ವಿಶ್ವನಾಥ್, ರಾಜೇಶ್, ಹಿಮಾನಂದ್ ಇತರರಿದ್ದರು.

error: Content is protected !!