ಶಾಶ್ವತ ಅಭಿವೃದ್ಧಿ ಮಾಡದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ : ಡಾ. ಪ್ರಭಾ

ಶಾಶ್ವತ ಅಭಿವೃದ್ಧಿ ಮಾಡದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ : ಡಾ. ಪ್ರಭಾ

ಹರಪನಹಳ್ಳಿ ತಾ.ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿರುಸಿನ ಪ್ರಚಾರ

ಹರಪನಹಳ್ಳಿ, ಏ. 30 – ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್‍ಗೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮತದಾರರಲ್ಲಿ ವಿನಂತಿಸಿಕೊಂಡರು. 

ತಾಲ್ಲೂಕಿನ ಹಿರೇಮೇಗಳಗೆರೆ, ಲಕ್ಷ್ಮೀಪುರ, ಶಿಂಗ್ರಿಹಳ್ಳಿ, ರಾಗಿಮಸಲವಾಡ, ಕಂಚಿಕೇರಿ, ಅಡವಿಹಳ್ಳಿ, ಕೂಲಹಳ್ಳಿ, ಬಾಗಳಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯವರು, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕೇವಲ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಎಂದು ದೂರಿದರು.

ನಾನು ಕಳೆದ ಹಲವಾರು ವರ್ಷಗಳಿಂದ ಎಸ್‍ಎಸ್ ಕೇರ್ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಟ್ರಸ್ಟ್ ಮೂಲಕ ಅನೇಕ ಬಡವರಿಗೆ ಮಹಿಳೆಯರಿಗೆ ಸಹಾಯ ಮಾಡಿದ್ದೇನೆ, ಇನ್ನಷ್ಟು ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ಪಕ್ಷದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ, ಮುನಿಸುಗಳನ್ನು ಮರೆತು ಒಗ್ಗಟ್ಟಾಗಿ ಎಲ್ಲರೂ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದೆ, ಬಿಜೆಪಿಯವರ ಮಾತಿಗೆ ಮರುಳಾಗದೇ ಎಲ್ಲಾರೂ ಹಸ್ತ ಗುರುತಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅರಸೀಕೆರೆ ಎನ್. ಕೊಟ್ರೇಶ್ ಮಾತನಾಡಿ, ಕೇಂದ್ರದಲ್ಲಿ ಹತ್ತು ವರ್ಷ ಆಡಳಿತ ನಡೆಸಿದ ಬಿಜೆಪಿ ಬಡವರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆ ಜಾರಿ ಮಾಡಿಲ್ಲ, ಆದರೆ ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ನಡೆದಿದೆ ಎಂದರು.

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಹಣ ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಿದ ಅನೇಕ ಭರವಸೆಗಳನ್ನು ಈಡೇರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಮುಖಂಡ ಸಿನಿಮಾ ರಾಜಣ್ಣ, ಆಲದಳ್ಳಿ ಷಣ್ಮುಖಪ್ಪ, ಕೋಡಿ ಭೀಮಣ್ಣ, ಹಲಗೇರಿ ಮಂಜಪ್ಪ, ಕಂಚಿಕೇರಿ ಜಯಲಕ್ಷ್ಮಿ, ಸುಷ್ಮಾ ಪಾಟೀಲ್, ಶಾಂತರೆಡ್ಡಿ, ಮತ್ತೂರು ಬಸವರಾಜ, ಉದಯಶಂಕರ, ಪ್ರಸಾದ, ನಾಗರಾಜ, ಬಸವರಾಜ ಸೇರಿದಂತೆ ಇತರರಿದ್ದರು.

error: Content is protected !!