ಪೋಷಕರಿಗೊಂದು ಕಿವಿಮಾತು

ಪೋಷಕರಿಗೊಂದು ಕಿವಿಮಾತು

ಮಕ್ಕಳಲ್ಲಿ ಕಲಿಕೆ ಆರಂಭವಾಗುವುದು ಅನುಕರಣೆಯಿಂದ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಮಕ್ಕಳಲ್ಲಿ ಅನುಕರಣೆ ಮೊಳಕೆ ಯೊಡೆಯುವಾಗ ಪೋಷಕರು ಮತ್ತು ಹಿರಿಯರು ಮನೆಯಲ್ಲಿ ಮಕ್ಕಳಿರುವುದನ್ನು ಅರಿತು ಯಾವುದೇ ಕಾರ್ಯದಲ್ಲಿ ತೊಡಗುವಾಗ ಬಹಳಷ್ಟು ಎಚ್ಚರವಹಿಸಬೇಕು, ಮಾತನಾಡಬೇಕು, ಮಾತನಾಡುವಾಗಲೂ ಸಹ ಯೋಚಿಸಿ, ತಾಳ್ಮೆಯಿಂದಿರಬೇಕು ಮತ್ತು ನಮ್ಮ ಭಾಷೆ ಮೃದುವಾಗಿರಬೇಕು.

ಇಂದಿನ ತಂತ್ರಜ್ಞಾನದ ಜಗತ್ತಿಗೆ ಬಂದರೆ ಪೋಷಕರಾದ ನಾವು ಮೊಬೈಲ್, ಟಿ.ವಿ ಹಾಗೂ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ವ್ಯಯ ಮಾಡುತ್ತಿದ್ದೇವೆ. ಆದರೆ, ನಮ್ಮ ಮಕ್ಕಳು ಸಹ ಅದನ್ನೇ ಅನುಸರಿಸುತ್ತಿದ್ದಾರೆ. ಮಕ್ಕಳಿಗೆ ಪೋಷಕರೇ ಮೊದಲ ಆದರ್ಶ ವ್ಯಕ್ತಿಗಳಾಗಿರುವುದರಿಂದ ನಮ್ಮ ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಾಣಬೇಕಾದರೆ, ಪೋಷಕರ ಪಾತ್ರ ಬಹುಮುಖ್ಯವಾದದ್ದು. ಈ ತಂತ್ರಜ್ಞಾನದ ಬಳಕೆ ತಪ್ಪು ಎಂಬುದು ನನ್ನ ಮಾತಿನ ಅರ್ಥವಲ್ಲ. ಈ ತಂತಜ್ಞಾನದ ಬಳಕೆಯಿಂದ ನಮ್ಮ ಮಕ್ಕಳು ಭಾವನಾತ್ಮಕವಾಗಿ ಬೆಳೆಯದೇ ಕೃತಕವಾಗಿ ಬೆಳೆಯುತ್ತಿದ್ದಾರೆ. ನಮ್ಮ ಮಕ್ಕಳನ್ನು ನಾವೇ ಭಾವನಾ ಹೀನರನ್ನಾಗಿ ಮಾಡುತ್ತಿದ್ದೇವೆ. ಆದ್ದರಿಂದ ಪೋಷಕರಲ್ಲಿ ಒಂದು ವಿನಂತಿ ಏನೆಂದರೆ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಾವು ಆ ತಂತ್ರಜ್ಞಾನವನ್ನು ಯಾವುದಕ್ಕೆ, ಎಷ್ಟು ಸಮಯ, ಯಾವಾಗ ಯಾವ ಸಂದರ್ಭದಲ್ಲಿ ಬಳಕೆ ಮಾಡಬೇಕು ಎಂದು ಅರಿತು ನಮ್ಮ ಮಕ್ಕಳೊಂದಿಗೆ ಭಾವನಾತ್ಮಕವಾಗಿ ಬೆರೆತು ಅವರನ್ನು ಭಾವನೆಗಳ ಜೊತೆ ಬೆಳೆಸಬೇಕು. ಇಲ್ಲದಿದ್ದರೆ ಅವರು ಭಾವನೆಗಳ ಕುಂಠಿತರಾಗಿ ಸಂಬಂಧಗಳ ಬೆಲೆ, ಪರಿಚಯ ಇಲ್ಲದಂತಾಗುತ್ತಾರೆ.

ಪೋಷಕರು ನಿಮ್ಮ ಒಂದು ಅನುಭವಕ್ಕಾಗಿ ಪ್ರಯೋಗ ಮಾಡಿ ನೋಡಿ. ನಿಮ್ಮ ಮನೆಯಲ್ಲಿ ಎರಡು ಆಥವಾ ಮೂರು ವರುಷದ ಮಗುವಿದ್ದರೆ, ಅದರ ಮುಂದೆ ನೀವು ಒಂದು ಪುಸ್ತಕ – ಪೆನ್ನನ್ನು ತೆಗೆದುಕೊಂಡು ಕೆಲವು ನಿಮಿಷಗಳ ಕಾಲ ಏನಾದರು ಬರೆಯುವುದು, ಚಿತ್ರ ಬಿಡಿಸುವುದು ಮಾಡಿ, ನಂತರ ಆ ಪುಸ್ತಕ ಪೆನ್ನನ್ನು ಅಲ್ಲಿಯೇ ಬಿಟ್ಟು ಆ ಮಗುವಿಗೆ ಕಾಣದಂತೆ ಮರೆಯಾಗಿ ನೀವು ನಿಂತುಕೊಂಡು ಗಮನಿಸಿ, ಆಗ ಆ ಮಗು ನೀವು ಇಟ್ಟ ಪುಸ್ತಕ ಪೆನ್ನನ್ನು ತೆಗೆದುಕೊಂಡು ಗೀಚಲು ಆರಂಭಿಸುತ್ತದೆ. ಅನುಕರಣೆ ಮಕ್ಕಳಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಇದು ಒಂದು ಚಿಕ್ಕ ಪ್ರಯೋಗ.

ಪೋಷಕ ಬಂಧುಗಳೇ ನಮ್ಮ ಮಗುವಿನ ಸಕಾರಾತ್ಮಕ, ಲಾಭದಾಯಕ, ಆಸಕ್ತಿದಾಯಕ, ಛಲದಾಯಕ, ಸಾಧನಾತ್ಮಕ ಬೆಳವಣಿಗೆಗೆ ನಾವುಗಳೇ ಭದ್ರ ಬುನಾದಿ ಹಾಕಬೇಕು. ಆದ್ದರಿಂದ ನಾವುಗಳು ಮಕ್ಕಳಿಗೆ ಪ್ರಥಮ ಆದರ್ಶ ವ್ಯಕ್ತಿಗಳಾಗೋಣ. ನಮ್ಮಲ್ಲಿ ಸಕಾರಾತ್ಮಕ ಮನೋಭಾವನೆಗಳನ್ನು ಬೆಳೆಸಿಕೊಳ್ಳೋಣ, ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು, ನಮ್ಮ ಮಗುವಿಗೆ, ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡೋಣ.


– ಮಂಜುಳ ಎ.ಎನ್., ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರ ವಿಭಾಗ, ಬಾಪೂಜಿ ಇನ್‌ ಸ್ಟಿಟ್ಯೂಟ್ ಆಫ್ ಹೈ- ಟೆಕ್ ಎಜ್ಯುಕೇಶನ್, ದಾವಣಗೆರೆ.

error: Content is protected !!