ನವೀಕರಣ ವಿದ್ಯುತ್‌ಗೆ ಅದಾನಿಯಿಂದ 2.30 ಲಕ್ಷ ಕೋಟಿ ರೂ. ಹೂಡಿಕೆ

ನವೀಕರಣ ವಿದ್ಯುತ್‌ಗೆ ಅದಾನಿಯಿಂದ 2.30 ಲಕ್ಷ ಕೋಟಿ ರೂ. ಹೂಡಿಕೆ

ಅಹಮದಾಬಾದ್, ಏ. 7 – ಭಾರತದ ಮಹತ್ವಾಕಾಂಕ್ಷಿ ನವೀಕರಣ ಇಂಧನ ವಿಸ್ತರಣೆ, ಸೌರ ಹಾಗೂ ಪವನ ವಿದ್ಯುತ್ ವಲಯದಲ್ಲಿ 2.30 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಅದಾನಿ ಸಮೂಹ ನಿರ್ಧರಿಸಿದೆ.

ಅದಾನಿ ಗ್ರೀನ್ ಎನರ್ಜಿ ಕಂಪನಿಯು ಗುಜರಾತ್‌ನ ಖಾವ್ಡಾದಲ್ಲಿನ ಸೌರ ಹಾಗೂ ಪವನ ವಿದ್ಯುತ್ ಸಾಮರ್ಥ್ಯವನ್ನು ಈಗಿರುವ 2 ಗಿಗಾ ವ್ಯಾಟ್‌ಗಳಿಂದ 30 ಗಿಗಾ ವ್ಯಾಟ್‌ಗಳಿಗೆ ಹೆಚ್ಚಿಸಲು 1.50 ಲಕ್ಷ ಕೋಟಿ ರೂ.ಗಳ ಹೂಡಿಕೆ ಮಾಡಲಿದೆ. ದೇಶದ ಇತರೆಡೆ 6-7 ಗಿಗಾ ವ್ಯಾಟ್‌ ಸಾಮರ್ಥ್ಯದ ವಿದ್ಯುತ್ ಯೋಜನೆಗಳಿಗಾಗಿ 50 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಕಂಪ ನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅದಾನಿ ಗ್ರೀನ್ ಎನರ್ಜಿಯು ಪ್ರಸಕ್ತ 10.93 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇದು ಭಾರತದ ಅತಿ ದೊಡ್ಡ ನವೀಕರಣ ವಿದ್ಯುತ್ ಉತ್ಪಾದನಾ ಕಂಪನಿಯಾಗಿದೆ 2030ರ ವೇಳೆಗೆ 45 ಗಿಗಾವ್ಯಾಟ್ ನವೀಕರಣ ವಿದ್ಯುತ್ ಉತ್ಪಾದಿಸುವ ಗುರಿ ಕಂಪನಿಗಿದೆ. ಆ ವೇಳೆಗೆ ಖಾವ್ಡಾ ಒಂದರಿಂದಲೇ 30 ಜಿ.ಡಬ್ಲ್ಯೂ. ವಿದ್ಯುತ್ ದೊರೆಯಲಿದೆ. ಆ ವೇಳೆಗೆ ಖಾವ್ಡಾ ವಿಶ್ವದ ಅತಿ ದೊಡ್ಡ ನವೀಕರಣ ವಿದ್ಯುತ್ ಉತ್ಪಾದನಾ ಕೇಂದ್ರವಾಗಲಿದೆ.

ಈ ಬಗ್ಗೆ ಮಾತನಾಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಎಸ್. ಜೈನ್, ನಾವು ಖಾವ್ಡಾದಲ್ಲಿ 2 ಗಿಗಾವ್ಯಾಟ್ ಸಾಮರ್ಥ್ಯದ ಘಟಕ ಆರಂಭಿಸಿದ್ದೇವೆ. ಪ್ರಸಕ್ತ ಹಣಕಾಸು ವರ್ಷ ದಲ್ಲೇ 4 ಗಿಗವ್ಯಾಟ್ ಸಾಮರ್ಥ್ಯ ಸಿಗಲಿದೆ. ನಂತರ ದಲ್ಲಿ ಪ್ರತಿ ವರ್ಷ 5 ಗಿಗಾವ್ಯಾಟ್ ವಿದ್ಯುತ್ ಉತ್ಪಾ ದನಾ ಸಮರ್ಥ್ಯ ಸೇರ್ಪಡೆಯಾಗಲಿದೆ ಎಂದಿದ್ದಾರೆ.

ಅದಾನಿ ನ್ಯೂ ಇಂಡಸ್ಟ್ರೀಸ್ ಕಂಪನಿಯು ಸೌರಫಲಕ ಹಾಗೂ ಪವನ ಯಂತ್ರಗಳ ಉತ್ಪಾದನೆಗಾಗಿ ಗುಜರಾತ್‌ನ ಮುಂದ್ರದಲ್ಲಿ 30 ಸಾವಿರ ಕೋಟಿ ರೂ.ಗಳ ಹೂಡಿಕೆ ಮಾಡಲಿದೆ.

ಕಂಪನಿ ಪ್ರಸಕ್ತ ಮುಂದ್ರದಲ್ಲಿ 4 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಈ ಸಾಮರ್ಥ್ಯವನ್ನು 2026-27ರ ವೇಳೆಗೆ 10 ಗಿಗಾವ್ಯಾಟ್‌ಗೆ ಹೆಚ್ಚಿಸುವ ಗುರಿ ಇದೆ ಎಂದು ಜೈನ್ ತಿಳಿಸಿದ್ದಾರೆ. ಜೈನ್ ಅವರು ಈ ಕಂಪನಿಯ ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾರೆ.

2030ರ ವೇಳೆಗೆ ನವೀಕರಣ ಇಂಧನದ ಮೂಲಕ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿ ಸಲು ಭಾರತ ಗುರಿ ಹೊಂದಿದೆ. ಈ ದಿಸೆಯಲ್ಲಿ ಅದಾನಿ ಸಮೂಹ ಅತಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ. 

ಗುಜಾರತ್‌ನ ಖಾವ್ಡಾ 538 ಚದುರ ಕಿ.ಮೀ. ಪ್ರದೇಶದಲ್ಲಿ ಹರಡಿದೆ. ಇದು ಪ್ಯಾರಿಸ್‌ ನಗರ ಪ್ರದೇಶಕ್ಕಿಂತ ಐದು ಪಟ್ಟು ದೊಡ್ಡದಾಗಿದೆ. ಈ ಪ್ರದೇಶದಲ್ಲಿ 81 ಶತಕೋಟಿ ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ  ಇದೆ. ಇದು ಬೆಲ್ಜಿಯಂ, ಚಿಲಿ ಹಾಗೂ ಸ್ವಿಟ್ಜರ್‌ಲ್ಯಾಂಡ್ ರೀತಿಯ ದೇಶಗಳು ಬಳಸುವಷ್ಟು ವಿದ್ಯುತ್ ಆಗಿದೆ. ರಾಜಸ್ಥಾನ ಹಾಗೂ ತಮಿಳುನಾಡುಗಳಲ್ಲೂ ಅದಾನಿ ಗ್ರೀನ್ ಎನರ್ಜಿ ಹೂಡಿಕೆ ಮಾಡಿದೆ.

error: Content is protected !!