ಐದು ನೂರಕ್ಕೂ ಹೆಚ್ಚು ಜನರಿಗೆ ಔಷಧೋಪಚಾರ

ಐದು ನೂರಕ್ಕೂ ಹೆಚ್ಚು ಜನರಿಗೆ ಔಷಧೋಪಚಾರ

ಜಗಳೂರು ತಾ. ದೊಣೆಹಳ್ಳಿ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಆರೋಗ್ಯ ತಪಾಸಣೆ

ಜಗಳೂರು, ಮಾ. 28- ತಾಲ್ಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು. ಐದು ನೂರಕ್ಕೂ ಹೆಚ್ಚು ಜನರು ವಿವಿಧ ಜಾಢ್ಯಗಳ ಪರೀಕ್ಷೆಗಳಿಗೊಳಪಟ್ಟು ಔಷಧೋಪಚಾರವನ್ನು ಪಡೆದುಕೊಂಡರು.

ದಾವಣಗೆರೆ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು, ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರ ತಂಡ, ಜಗಳೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು, ಜಿಲ್ಲಾ ದಂತ ವೈದ್ಯರು ಕೋಶದ ತಜ್ಞ ವೈದ್ಯರು ಬೆಳಿಗ್ಗೆ ಯಿಂದ ಸಂಜೆಯವರೆಗೆ ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು.

ತಪಾಸಣೆಗೂ ಮುನ್ನ ಸಮಾವೇಶ ಉದ್ಘಾಟಿಸಿದ ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅವರು, ಮಠದ ವ್ಯವಸ್ಥೆಯೊಂದು ಜನ ಸಾಮಾನ್ಯರ ಆರೋಗ್ಯವನ್ನು ದೃಷ್ಟಿಯಲ್ಲಿ ಟ್ಟುಕೊಂಡು ಇಂತಹ ಸಮಾವೇಶ ನಡೆಸುತ್ತಿರುವುದು ಶ್ಲ್ಯಾಘನೀಯ ಸಂಗತಿ. ತಪಾಸಣಾ ಶಿಬಿರಗಳ ಜೊತೆಗೆ ಆರೋಗ್ಯ ಜಾಗೃತಿಯಂತಹ ಉಪನ್ಯಾಸಗಳನ್ನು ಏರ್ಪಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಹಳ್ಳಿಗಾಡಿನ ಬಹುತೇಕರಲ್ಲಿ ಹೃದಯ ಸಮಸ್ಯೆ ಮತ್ತು ಕ್ಯಾನ್ಸರ್‌ನಂತಹ ಜಾಢ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಹದಿ ವಯಸ್ಸಿನ ಯುವಕರು ಹೆಚ್ಚಾಗಿ ಹೃದಯ ಸ್ತಂಭನದಂತಹ ಕಾಯಿಲೆಯಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಜೀವನ ಶೈಲಿಯ ಅವ್ಯವಸ್ಥೆಯೇ ಮುಖ್ಯ ಕಾರಣ. ದುಶ್ಚಟಗಳು ಮತ್ತು ನಿತ್ಯದ ಆಹಾರ ಸೇವನೆಯಲ್ಲಿ ಆಗುತ್ತಿರುವ ವ್ಯತ್ಯಯಗಳು ಪ್ರಮುಖ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.

ಜನರು ಸಂಸ್ಕಾರಯುತ ಜೀವನ ಶೈಲಿಯನ್ನು ಚಾಚೂ ತಪ್ಪದೇ ಪಾಲಿಸಿದರೆ, ಯಾವುದೇ ಕಾಯಿಲೆಗಳಿಗೆ ತುತ್ತಾಗುವುದಿಲ್ಲ. ಹೀಗಾಗಿ ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸಿ, ಸರಳ ಆಹಾರವನ್ನು ಜೀವನ ಧರ್ಮವನ್ನಾಗಿಸಿಕೊಂಡರೆ ಆಯುಷ್ಯ ಪೂರ್ಣ ಬದುಕ ಬಹುದು ಎಂದು ಮುಖ್ಯ ಅತಿಥಿಯಾಗಿ  ಮಾತನಾಡಿದ ಬೆಂಗಳೂರಿನ ಹೆಸರಾಂತ ದಂತವೈದ್ಯ ಡಾ. ಪ್ರಫುಲ್ಲಾ ತುಮಾಟಿ ಭರವಸೆ ವ್ಯಕಪಡಿಸಿದರು.

ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯ ಡಾ. ಇಬ್ರಾಹಿಂ ನಾಗನೂರ್ , ದಾವಣಗೆರೆ ಹೆಸರಾಂತ ದಂತ ವೈದ್ಯ ಡಾ. ಹಾಲಸ್ವಾಮಿ ಕಂಬಾಳಿಮಠ ಮಾತನಾಡಿದರು. ಇದೇ ವೈದ್ಯರ ತಂಡ ತಪಾಸಣೆಯ ನೇತೃತ್ವವನ್ನು ವಹಿಸಿತ್ತು.

ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ಹೆಚ್. ರೇವಣ್ಣ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಗಡಿ ಮಾಕುಂಟೆ ಶಿವಕುಮಾರ್, ಮಾಜಿ ಸದಸ್ಯ ಟಿ. ಬಸವರಾಜ್, ಬೀಜ ನಿಗಮದ ನಿರ್ದೇಶಕ ರಾಜೇಂದ್ರ ಪ್ರಸಾದ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರ್. ವೀರೇಶ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ದೊಣೆಹಳ್ಳಿ ಗ್ರಾಮದವರೇ ಆದ ಪ್ರತಿಭಾನ್ವಿತ ಯುವ ವೈದ್ಯರಾದ ಡಾ.ಎ.ಟಿ. ರಾಕೇಶ್ ಮತ್ತು ಡಾ.ಹೆಚ್.ಜೆ. ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕೂಡ್ಲಿಗಿ ಶಾಸಕರೂ, ನೇತ್ರ ತಜ್ಞ ಡಾ. ಎನ್.ಟಿ. ಶ್ರೀನಿವಾಸ್ ಅವರು ಸಮಾವೇಶಗೊಂಡಿದ್ದ ವೈದ್ಯರ ತಂಡದೊಂದಿಗೆ ತಪಾಸಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಅವರೊಂದಿಗೆ ದಾಸೋಹ ಸಂಸ್ಕೃತಿ ಉತ್ಸವದ ಮುಖ್ಯ ಸಂಚಾಲಕರಾದ ದೊಣೆಹಳ್ಳಿ ಗುರುಮೂರ್ತಿ, ಕಾನಾಮ ಡುಗು ದಾಸೋಹ ಮಠದ ಐಮುಡಿ ಶರಣಾರ್ಯರು ಔಷಧಿ ವಿತರಣೆ, ಆಹಾರ, ನೀರು ಪೂರೈಕೆ ಮೂಲಕ ಇಡೀ ದಿನ ಶ್ರಮಿಸಿದರು. ಇವರೊಂದಿಗೆ ಗ್ರಾಮಸ್ಥರು ಮತ್ತು ಶರಣಶ್ರೀ ವಿದ್ಯಾಲಯದ ಮುಖ್ಯ ಶಿಕ್ಷಕಿ ಆಶಾ ಮತ್ತವರ ತಂಡ ಶಿಬಿರದ ಯಶಸ್ಸಿಗೆ ಶ್ರಮಿಸಿದತು. 

error: Content is protected !!