ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು

ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು

ಜಗಳೂರು ತಾಲ್ಲೂಕು ಕೊಡದಗುಡ್ಡದ ಧರ್ಮ ಸಭೆಯಲ್ಲಿ ರಂಭಾಪುರಿ ಶ್ರೀ ಅಭಿಮತ

ಜಗಳೂರು, ಮಾ.15- ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು. ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಸಮರ ಜೀವನ ಅಮರ ಜೀವನವಾಗಲು ಸಂಸ್ಕಾರ, ಸದ್ವಿಚಾರಗಳ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸುಕ್ಷೇತ್ರ ಕೊಡದಗುಡ್ಡ ವೀರಭದ್ರ ಸ್ವಾಮಿ ಹೆಸರಿನಲ್ಲಿ ನಿರ್ಮಿಸಿದ ಯಾತ್ರಿ ನಿವಾಸ, ದೇವಿಕೆರೆ ಮಹಾದ್ವಾರ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪದ ಶಿಲಾನ್ಯಾಸದ ಅಂಗವಾಗಿ ಸಂಸ್ಕೃತಿ ಜಾಗೃತಿಗಾಗಿ  ನಡೆದ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ವೈಚಾರಿಕತೆಯ ಬಿರುಗಾಳಿಯಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ನಾಶಗೊಳ್ಳಬಾರದು. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಮನುಷ್ಯನಿಗೆ ಹೆತ್ತ ತಾಯಿ, ಹೊತ್ತ ನೆಲ ಎಷ್ಟು ಮುಖ್ಯವೋ, ಧರ್ಮವೂ ಅಷ್ಟೇ ಮುಖ್ಯ ಎಂಬುದನ್ನು ಮರೆಯಬಾರದು ಎಂದರು.

ಉತ್ತರಾ ಖಂಡ ರಾಜ್ಯ ಊಖೀಮಠದ ಶ್ರೀ ಹಿಮವತ್ ಕೇದಾರ ಜಗದ್ಗುರು ರಾವಲ್ ಪದವಿಭೂಷಿತ  ಶ್ರೀ ಭೀಮಾಶಂಕರಲಿಂಗ ಶಿವಚಾರ್ಯ ಭಗವತ್ಪಾದರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧರ್ಮದ ದಿಕ್ಸೂಚಿಯಿಲ್ಲದೆ ಇದ್ದರೆ, ಬದುಕಿಗೆ ಅರ್ಥವೇ ಇಲ್ಲ. ಸಮೃದ್ದ  ನಾಡು ಕಟ್ಟುವುದೇ ಧರ್ಮ ಪೀಠಗಳ ಗುರಿಯಾಗಿದೆ. ಶಿವಾಗಮಗಳು ವೀರಶೈವ  ಧರ್ಮ ಸಾಹಿತ್ಯದ ಮೂಲ ಬೇರುಗಳು. ಜೀವನದ ಜಂಜಾಟದಲ್ಲಿ ಸಿಲುಕಿರುವ  ಮನುಷ್ಯನಿಗೆ  ಪುಣ್ಯ ಕ್ಷೇತ್ರಗಳು ಸ್ಪೂರ್ತಿ ಮತ್ತು ಚೈತನ್ಯ ನೀಡುವ ಕೇಂದ್ರಗಳಾಗಿವೆ ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಪಂಚಪೀಠಗಳು ಜ್ಞಾನ, ಭಕ್ತಿ, ಪ್ರಸಾದ ಒದಗಿಸುವ ತ್ರಿವಿಧ ದಾಸೋಹ ಕೇಂದ್ರಗಳಾಗಿವೆ ಎಂದರು.

ಮನುಷ್ಯನಿಗೆ ಸಾಲ ಸೂಲ, ಹಸಿವು ಗಳಿಗಿಂತ ಮಿಗಿಲಾದದ್ದು ಧರ್ಮದ ತಳ ಹದಿಯ ಮೇಲೆ ಅಧ್ಯಾತ್ಮಿಕತೆ ಹಸಿವು ನೀಗಿಸುವ ಮಠಗಳಿಂದ ಮನುಷ್ಯ ಮುಕ್ತಿ ಮಾರ್ಗ ಗಳಿಸ ಬೇಕು‌. ನನ್ನ ಆಡಳಿತಾವಧಿಯಲ್ಲಿ ಕೊಡದಗುಡ್ಡ ಶ್ರೀಕ್ಷೇತ್ರದಲ್ಲಿ ಕಲ್ಯಾಣ ಮಂಟಪ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವೆ ಎಂಬ ಭರವಸೆಯೊಂದಿಗೆ ವೈಯಕ್ತಿಕವಾಗಿ 11 ಲಕ್ಷ ರೂ. ನಗದು ದೇಣಿಗೆ ವಿತರಿಸಿದರು. 

ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಸ್ವಾಮೀಜಿ, ಸೋಮೇಶ್ವರನ ಉಗಮಸ್ಥಾನ ಮತ್ತು ಗೋಕರ್ಣ ಕ್ಷೇತ್ರ ಅಭಿವೃದ್ದಿಯ ಜೊತೆಗೆ ದೇಶದ ಜನರಿಗೆ ಸದ್ಭಾವನೆ ಮೂಡಿಸಿದ ರಂಭಾಪುರಿ ಪೀಠದ ಗೋತ್ರ ಪುರುಷ ವೀರಭದ್ರಸ್ವಾಮಿ ಎಂಬುದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಸಮಾರಂಭಕ್ಕೂ ಮುನ್ನ ಬಸವಾಪುರದ ಆಂಜನೇಯ ದೇವಸ್ಥಾನದಿಂದ ಕೊಡದ ಗುಡ್ಡದ ವೀರಭದ್ರೇಶ್ವರ ಸ್ವಾಮಿ ಕಲ್ಯಾಣ ಮಂಟಪದವರೆಗೆ ಶ್ರೀ ರಂಭಾಪುರಿ ಜಗದ್ಗುರು ಗಳ ಮತ್ತು ಶ್ರೀ ಕೇದಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

ಈ ಸಂದರ್ಭದಲ್ಲಿ ರಾಮಘಟ್ಟ ರಾಜಗುರು ಪುರವರ್ಗ ಮಠದ ಶ್ರೀ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶಿರಾಳಕೊಪ್ಪದ ವಿರಕ್ತಮಠದ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಸಿದ್ದೇಶ್ವರ ದೇವರು, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಜೆ.ಎನ್. ಶಿವನಗೌಡ, ವಿ.ಎಸ್.ಎಸ್.ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ, ಗ್ರಾಪಂ ಅಧ್ಯಕ್ಷೆ ರಣದಮ್ಮ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ್ ,ಮುಖಂಡರಾದ ಶಿವಣ್ಣಗೌಡ, ಯು.ಜಿ.ಶಿವಕುಮಾರ್, ಪಲ್ಲಾಗಟ್ಟೆ ಶೇಖರಪ್ಪ, ಪ್ರಕಾಶ್, ಮಂಜುನಾಥ್, ರುದ್ರಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ನಾಗರತ್ನಮ್ಮ, ಶಿವಕುಮಾರಸ್ವಾಮಿ, ಬಿ.ಮಹೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!