ಪ್ರಣಾಳಿಕೆಯ ಬದಲು ವಿಕಸಿತ ಸಂಕಲ್ಪ

ಪ್ರಣಾಳಿಕೆಯ ಬದಲು ವಿಕಸಿತ ಸಂಕಲ್ಪ

ಕೋಟ್ಯಂತರ ಜನರ ಅಭಿಪ್ರಾಯ ಸಂಗ್ರಹ : ಮಾಳವಿಕ ಅವಿನಾಶ್‌

ದಾವಣಗೆರೆ, ಮಾ. 15 – ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಣಾಳಿಕೆಯ ಬದಲು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ `ಸಂಕಲ್ಪ ಪತ್ರ’ ಬಿಡುಗಡೆ ಮಾಡಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಪತ್ರ ಸಲಹಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಕೆಲವೇ ತಜ್ಞರಿಂದ ಚುನಾವಣಾ ಪ್ರಣಾಳಿಕೆ ರೂಪಿಸಲಾಗು ತ್ತಿತ್ತು. ಈ ಬಾರಿ ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ದೃಷ್ಟಿಕೋನದ ಸಂಕಲ್ಪ ಪತ್ರವನ್ನು ಕೋಟ್ಯಂತರ ಜನರಿಂದ ಅಭಿಪ್ರಾಯ ಸಂಗ್ರಹಿಸಿ, ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕಾಗಿ ಜನರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಫೋನ್ ಮೂಲಕ, ಎಲ್.ಇ.ಡಿ. ವಾಹನ ದ ಮೂಲಕ ಜನರನ್ನು ಭೇಟಿ ಮಾಡಿ ಹಾಗೂ ನಮೋ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದೇ ದಿನಾಂಕ  17-18ರ ಒಳಗೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಅಭಿಪ್ರಾಯ ಆಧರಿಸಿ ಸಂಕಲ್ಪ ಪತ್ರ ರೂಪಿಸಿ ಬಿಡುಗಡೆ ಮಾಡಲಾಗುವುದು ಎಂದು ಮಾಳವಿಕ ತಿಳಿಸಿದರು.

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರ ಖಾತೆ ಗಳಿಗೆ ನೇರ ಸಬ್ಸಿಡಿ ನೀಡುವ ಮೂಲಕ ಮಧ್ಯವರ್ತಿಗಳ ಹಾವಳಿ ನಿವಾರಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಆರೋಗ್ಯ ಸೇವೆ, ಜನೌಷಧಿ ಮೂಲಕ ಕಡಿಮೆ ವೆಚ್ಚದ ಔಷಧಿ, ಮುದ್ರಾ – ವಿಶ್ವಕರ್ಮ – ಸ್ವನಿಧಿ ಯೋಜನೆಯ ಮೂಲಕ ದುಡಿಯುವ ವರ್ಗಕ್ಕೆ ನೆರವು ಕಲ್ಪಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಯಿಂದ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ನೀಡ ಲಾಗುತ್ತಿದೆ ಎಂದರು.

ಮತೀಯ ಹಿಂಸಾಚಾರಕ್ಕೆ ಒಳಗಾ ದವರಿಗೆ ಪೌರತ್ವ ನೀಡುವ ಸಿ.ಎ.ಎ. ಕಾಯ್ದೆ ಜಾರಿಗೆ ತರಲಾಗಿದೆ, 370ನೇ ವಿಧಿ ರದ್ಧತಿ ಹಾಗೂ ರಾಮ ಮಂದಿರ ನಿರ್ಮಾಣದ ಕ್ರಮಗಳನ್ನು ತೆಗೆದುಕೊಂಡಿರುವುದು ಪ್ರಮುಖ ಸಾಧನೆ ಎಂದು ಮಾಳವಿಕ ಹೇಳಿದರು.

ಶೇ.33ರಷ್ಟು ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಮೀಸಲಾತಿ ಕಲ್ಪಿಸುವ ಕ್ರಮ ತೆಗೆದುಕೊಳ್ಳಲಾಗಿದೆ. ಈ ಬಾರಿ ದಾವಣ ಗೆರೆ ಲೋಕಸಭಾ ಕ್ಷೇತ್ರಕ್ಕೆ ಮಹಿಳೆಗೆ ಟಿಕೆಟ್ ನೀಡಲಾಗಿದೆ. ಗಾಯತ್ರಿ ಸಿದ್ದೇಶ್ವರ ಅವರು ಗೆಲ್ಲುವ ಮೂಲಕ ಲೋಕಸಭೆ ಯಲ್ಲಿ ರಾಜ್ಯದ ಧ್ವನಿಯಾಗಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಕೋಷ್ಠದ ಸಂಚಾಲಕ ದತ್ತಾತ್ರೇಯ, ಭಾರತ ಈಗ ವೇಗದ ಬೆಳವಣಿಗೆ ಕಾಣುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿದಿನ ಸಾವಿರಾರು ಕೋಟಿ ರೂ.ಗಳ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಯೋಜನೆಗಳ ಶಿಲಾನ್ಯಾಸದ ದಿನವೇ ಅವುಗಳ ಉದ್ಘಾಟನಾ ದಿನವೂ ನಿರ್ಧಾರವಾಗುತ್ತಿದೆ. ಈ ಅಭಿವೃದ್ಧಿ ಇನ್ನಷ್ಟು ವೇಗ ಪಡೆದು ಭಾರತ ವಿಕಸಿತ ದೇಶ ಆಗಬೇಕಿದೆ ಎಂದರು.

ವೇದಿಕೆಯ ಮೇಲೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯಕ್, ಮುಖಂಡರಾದ ಧನಂಜಯ್ ಕಡ್ಲೇಬಾಳ್, ಹನುಮಂತ ನಾಯಕ್, ಡಿ.ಎಸ್. ಶಿವಶಂಕರ್, ಹನಗವಾಡಿ ವೀರೇಶ್, ರಾಘವೇಂದ್ರ, ಅಣ್ಣೇಶ್, ಕೊಳೇನ ಹಳ್ಳಿ ಸತೀಶ್, ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!