ದಾಸ ಸಾಹಿತ್ಯ ಸರ್ವ ಶ್ರೇಷ್ಠವಾದದ್ದು

ದಾಸ ಸಾಹಿತ್ಯ ಸರ್ವ ಶ್ರೇಷ್ಠವಾದದ್ದು

ಚನ್ನಗಿರಿ : ಕಸಾಪ ಕಾರ್ಯಕ್ರಮದಲ್ಲಿ ಜನಪದ ಕಲಾವಿದ ಎಂ.ಬಿ.ಜಯಪ್ಪ

ಚನ್ನಗಿರಿ, ಡಿ. 1 – ದಾಸ ಸಾಹಿತ್ಯದಲ್ಲಿ ಸಮಾನತೆಯ ಸಮಾಜದ ಧೋರಣೆ, ಸಾಮಾಜಿಕ ಕಳಕಳಿ, ಲೋಕ ವಿಮರ್ಶೆ, ಸಾಮಾಜಿಕ ಚಿಂತನೆ ಮತ್ತು ವೈಚಾರಿಕ ಮನೋಭಾವನೆಗಳು ಕಂಡು ಬರುವುದ ರಿಂದ ದಾಸ ಸಾಹಿತ್ಯವನ್ನು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗಿದೆ ಎಂದು ಜನಪದ ಕಲಾವಿದ ಎಂ.ಬಿ.ಜಯಪ್ಪ ತಿಳಿಸಿದರು.

ತಾಲ್ಲೂಕಿನ ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಂದು ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು. 

ದಾಸ ಶ್ರೇಷ್ಠರುಗಳು ತಮ್ಮ ಕೀರ್ತನೆಗಳ ಮೂಲಕ ಜನರ ನಡವಳಿಕೆ, ಸಮಾಜದಲ್ಲಿ ಬೇರುಬಿಟ್ಟ ರೂಢಿಗತ ಸಂಪ್ರದಾಯಗಳು, ಜಾತಿ ವ್ಯವಸ್ಥೆ, ಬಡವ ಬಲ್ಲಿದ, ಮೇಲು- ಕೀಳೆಂಬ ತಾರತಮ್ಯಗಳು, ಬದುಕಿನ ಆಡಂಬರ ಮೊದಲಾದ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಪರಿಷತ್ತು ನಡೆದು ಬಂದ ದಾರಿ ಹಾಗೂ ದತ್ತಿ ಕಾರ್ಯಕ್ರಮಗಳ ಮಹತ್ವವನ್ನು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ಎಂ.ಆರ್. ಲೋಕೇಶ್ ಮಾತನಾಡಿ, ವ್ಯಕ್ತಿಯ ಪರಿ ಪೂರ್ಣ ವಿಕಸನಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಅಧ್ಯಯನದ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ಬಿ.ಎನ್.ರಂಗಪ್ಪ, ಕುಸುಮ ರಂಗಪ್ಪ, ಬಿ.ಜಿ.ಅಮಿತ್, ಪ್ರಾಧ್ಯಾಪಕರುಗಳಾದ ಪ್ರಕಾಶ್, ಎ.ಡಿ.ಬಸವರಾಜ್, ಯೋಗೇಶ್, ಓಬಳೇಶ್, ಗೋವಿಂದ ರೆಡ್ಡಿ, ಕರಿಬಸಪ್ಪ ಮತ್ತಿತರರು ಹಾಜರಿದ್ದರು.

error: Content is protected !!