ಬಿಜೆಪಿ ದುರಾಡಳಿತದಿಂದ ವಿಧಾನಸೌಧದ ಗೋಡೆ ಗೋಡೆಗಳಲ್ಲಿ ಲಂಚದ ಪ್ರತಿಧ್ವನಿ

ಬಿಜೆಪಿ ದುರಾಡಳಿತದಿಂದ ವಿಧಾನಸೌಧದ ಗೋಡೆ ಗೋಡೆಗಳಲ್ಲಿ ಲಂಚದ ಪ್ರತಿಧ್ವನಿ

ಹೂವಿನಹಡಗಲಿ, ಏ. 26 – ಕಳೆದ ನಾಲ್ಕು ವರ್ಷಗಳ ಬಿಜೆಪಿ ಆಡಳಿತದಲ್ಲಿ ವಿಧಾನಸೌಧದ ಗೋಡೆ ಗೋಡೆಗಳಲ್ಲಿ ಲಂಚ ಪ್ರತಿಧ್ವನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ 40% ಲಂಚ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ ಎಂದರು.

ಈ ಭ್ರಷ್ಟಾಚಾರಕ್ಕೆ ನರೇಂದ್ರ ಮೋದಿಯ ವರು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ನಾನು ಬಸವರಾಜ ಬೊಮ್ಮಾಯಿ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೇನೆ. ಇದನ್ನು ಬಿಜೆಪಿಯವರು ತಿರುಚಿ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಸಾಮಾಜಿಕ ಜಾಲಗಳಲ್ಲಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿಗಳಾಗಿ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ನಾನು ಲಿಂಗಾಯತ ದ್ವೇಷಿಯಲ್ಲ, ಬಸವ ತತ್ವಗಳನ್ನು ನಂಬಿದವನು. ಲಿಂಗಾಯತರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನ ಇದೆ ಎಂದು ತಿಳಿಸಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ತಲಾ 7 ಕೆಜಿ ಅಕ್ಕಿಯನ್ನು ಕೊಟ್ಟಿದ್ದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಲಾ ಐದು ಕೆಜಿ ಅಕ್ಕಿಯನ್ನು ಕೊಡುತ್ತಿದೆ. ಆವತ್ತು ನಮ್ಮ ಸರ್ಕಾರ ಬಡವರಿಗೆ 15 ಲಕ್ಷ ಸೂರುಗಳನ್ನು ಕೊಟ್ಟಿತ್ತು. ಆದರೆ, ಬಿಜೆಪಿ ಸರ್ಕಾರದಿಂದ ಇವತ್ತು ನೂರು ಮನೆಗಳನ್ನು ಕೊಡುವುದಕ್ಕೆ ಆಗಲಿಲ್ಲ ಎಂದು ಟೀಕಿಸಿದರು.

error: Content is protected !!