ನೆಮ್ಮದಿ ಜೀವನಕ್ಕೆ ಯೋಧರು ಪೊಲೀಸರ ನಿಸ್ವಾರ್ಥ ಸೇವೆ ಕಾರಣ

ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ  ನ್ಯಾ.ರಾಜೇಶ್ವರಿ ಹೆಗಡೆ

ದಾವಣಗೆರೆ, ಅ.21- ಯೋಧರು ಮತ್ತು ಪೊಲೀಸರ ನಿಸ್ವಾರ್ಥ ಸೇವೆ, ಕರ್ತವ್ಯ ನಿಷ್ಠೆಯಿಂದಾಗಿ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿ ಕೊಂಡಿದ್ದ ಪೊಲೀಸ್ ಹುತಾತ್ಮ ದಿನಾ ಚರಣೆ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ ದರು.

ಎಂಥದೇ ಸಂದರ್ಭ ಬಂದರೂ ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಕಾನೂನು ಸುವ್ಯವಸ್ಥೆ ಅನುಷ್ಠಾನಗೊಳಿಸುವಲ್ಲಿ ಸಂಚಾರಿ ಪೊಲೀಸರ ಪಾತ್ರ ಅತ್ಯಂತ ಮಹತ್ವವಾದುದು. ಆದರೆ ಜನರಲ್ಲಿ ಸಂಚಾರ ನಿಯಮಗಳ ಅರಿವು ಇದ್ದರೂ ಕೂಡ, ಅವುಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ನಿತ್ಯ ನೋಡುತ್ತೇವೆ. ಈ ರೀತಿ ಆಗದಂತೆ ಸಾರ್ವಜನಿಕರೂ ಸಹ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

ಸಾರ್ವಜನಿಕರಲ್ಲಿ ಶಿಸ್ತಿನ ನಡವಳಿಕೆಗ ಳನ್ನು ರೂಢಿಸಿಕೊಂಡರೆ ಪೊಲೀಸರು ಸಹ ನೆಮ್ಮದಿ ಜೀವನ ನಡೆಸಲು ಸಹಕಾರಿಯಾ ಗಲಿದೆ. ದೇಶದ ಗಡಿಯಲ್ಲಿ ಯೋಧರು, ದೇಶದೊಳಗೆ ಪೊಲೀಸರು ನಿತ್ಯ ರಕ್ಷಣೆಯ ಕೆಲಸ ಮಾಡುವುದರಿಂದಲೇ ಜನರ ನೆಮ್ಮದಿ ಜೀವನ ಸಾಧ್ಯವಾಗಿದೆ ಎಂದು ಹೇಳಿದರು.

ಬಿಸಿಲು, ಮಳೆಯನ್ನೂ ಲೆಕ್ಕಿಸದೇ, ಕುಟುಂಬಗಳನ್ನು ತೊರೆದು ದೇಶಕ್ಕಾಗಿ ಹಗಲಿ ರುಳು ಕರ್ತವ್ಯ ನಿರ್ವಹಿಸಿ, ಪ್ರಾಣ ತ್ಯಾಗ ಮಾಡಿದ ಪೊಲೀಸ್ ಹುತಾತ್ಮರ ಸ್ಮರಣೆ ಅವಶ್ಯ ವಾಗಿದೆ. ಹುತಾತ್ಮರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿರಂತರ ವಾಗಿ ಸ್ಮರಿಸುವಂತಾಗಬೇಕು ಎಂದರು.

ಇತ್ತೀಚಿಗೆ ಕೇಂದ್ರ ಸಚಿವರೊಬ್ಬರು ದೇಶದ ಒಂದು ಸಾವಿರ ಶಾಲೆಗಳಲ್ಲಿ ದೇಶದ ಸಾಧಕರ ಭಾವಚಿತ್ರ ಪ್ರದರ್ಶಿಸುವ ಮೂಲಕ ಅವರ ಸಾಧನೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿರು ವುದು ಸ್ವಾಗತಾರ್ಹ ಎಂದು ತಿಳಿಸಿದರು.

ಪೂರ್ವವಲಯ ಐಜಿಪಿ ಎಸ್. ರವಿ ಮಾತನಾಡಿ, ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಪೊಲೀಸರಿಗೆ ಶಿಸ್ತೇ ಬ್ರಹ್ಮಾಸ್ತ್ರ. ಶಿಸ್ತು ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾವು, ನೋವುಗಳು ಸಂಭವಿಸುವುದು ಅನಿವಾರ್ಯ. ಆದರೆ
ನಮ್ಮ ಕೈಯಿಂದ ಆಗಬಾರದು ಎಂದು ಕಿವಿಮಾತು ಹೇಳಿದರು.

ಪ್ರಜ್ಞೆ, ಶಿಸ್ತನ್ನು ಬಲಿಕೊಟ್ಟಾಗ ಅದಕ್ಕೆ ನಾವೇ ಬಲಿಯಾಗುತ್ತೇವೆ. ಜಾಗರೂಕರಾಗಿ, ಶಿಸ್ತಿನಿಂದ ವರ್ತಿಸುವ ಜೊತೆಗೆ ಸಮಾಜ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದರು.

ಎಸ್ಪಿ ಸಿ.ಬಿ. ರಿಷ್ಯಂತ್ ಹುತಾತ್ಮರ ನಾಮ ಸ್ಮರಣೆ ಮಾಡಿದರು. ಮೇಯರ್ ಎಸ್.ಟಿ. ವೀರೇಶ್, ಅಡಿಷನಲ್ ಎಸ್ಪಿ ರಾಜೀವ್, ಎಎಸ್ಪಿ ಕನ್ನಿಕಾ, ಸಹಾಯಕ ಅಭಿಯೋಜಕರಾದ ಕಲ್ಪನಾ, ಆರ್‌ಟಿಓ ಶ್ರೀಧರ ಮಲ್ನಾಡ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಡಿಹೆಚ್‌ಓ ನಾಗರಾಜ್, ಅಗ್ನಿಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮಾ, ಸಿಪಿಐ ಗುರುಬಸವರಾಜ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಸೇರಿದಂತೆ, ಅನೇಕರು ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.

ಇದೇ ವೇಳೆ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ನಂತರ ಹುತಾತ್ಮರಿಗೆ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

error: Content is protected !!