ಕೊಕ್ಕನೂರು : ನಾಳೆ ಹನುಮಪ್ಪನ ತೇರು

ಕೊಕ್ಕನೂರು : ನಾಳೆ ಹನುಮಪ್ಪನ ತೇರು

ಮಲೇಬೆನ್ನೂರು, ಏ. 15- ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಮಹಾ ರಥೋತ್ಸವವು ನಾಳೆ ದಿನಾಂಕ 17ರ ಬುಧವಾರ ಜರುಗಲಿದೆ.

ರಥೋತ್ಸವದ ಅಂಗವಾಗಿ ಇಂದು ಮಂಗಳವಾರ ಬೆಳಿಗ್ಗೆ ಮತ್ತು ಸಂಜೆ ಶ್ರೀ ಸ್ವಾಮಿಯ ಅಶ್ವೋತ್ಸವ, ರಾತ್ರಿ 10.30ಕ್ಕೆ ರಥಕ್ಕೆ ಕಳಸ ಸ್ಥಾಪನೆ ಮತ್ತು ಬುಧವಾರ ಬೆಳಗಿನ ಜಾವ ಸ್ವಾಮಿಯ ಗಜೋತ್ಸವ ನಡೆಯಲಿದೆ.

ನಾಳೆ ದಿನಾಂಕ 17ರ ಬುಧವಾರ ಬೆಳಿಗ್ಗೆ 10.45 ರಿಂದ 11.20ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ನೆರವೇರಲಿದ್ದು, ಮಧ್ಯಾಹ್ನ 12.30ಕ್ಕೆ ಶ್ರೀ ಆಂಜನೇಯ ಸ್ವಾಮಿಯ  ಬ್ರಹ್ಮ ರಥೋತ್ಸವ, ನಂತರ ಭಕ್ತಾಧಿಗಳಿಂದ ವಿವಿಧ ಸೇವಾ ಕಾರ್ಯಕ್ರಮಗಳು ನಡೆಯಲಿವೆ.

ಇದೇ ದಿನ ತಡರಾತ್ರಿ (ಗುರುವಾರ) ಬೆಳಗಿನ ಜಾವ ಶ್ರೀ ಆಂಜನೇಯ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ.

ದಿನಾಂಕ 18ರ ಗುರುವಾರ ಭಕ್ತಾಧಿಗಳಿಂದ ಶ್ರೀ ಸ್ವಾಮಿಯ ಸೇವೆ, ಮಧ್ಯಾಹ್ನ ಶ್ರೀ ಸ್ವಾಮಿಯು ಭೇಟೆಯಾಡಲು ಹೊರಡುವುದು. ಸಂಜೆ ಓಕುಳಿ, ರಾತ್ರಿ ಡೊಳ್ಳು ಮೇಳ ಮತ್ತು ತೈಲಾದಿಗಳಿಂದ ಧೂಪ ಹಾಕಲಾಗುವುದು. 

ದಿನಾಂಕ 19ರ ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ಆಂಜನೇಯ ಸ್ವಾಮಿ, ಶ್ರೀ ದುರ್ಗಾಂಬ, ಶ್ರೀ ಮಾತಂಗ್ಯಮ್ಮ, ಜಿ.ಟಿ. ಕಟ್ಟೆ ಹಾಗೂ ಕೊಮಾರನಹಳ್ಳಿ ಗ್ರಾಮಗಳ ಶ್ರೀ ಬೀರದೇವರುಗಳೊಂದಿಗೆ ಗ್ರಾಮದ ಎಲ್ಲಾ ಮನೆಗಳಿಗೆ ಸಂದರ್ಶನ, ಸಂಜೆ ಭೂತ ಸೇವೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.

error: Content is protected !!