ಓದುಗರಿದ್ದಾರೆ ಆದರೆ ಸ್ವರೂಪ ಬದಲಾಗಿದೆ

ಓದುಗರಿದ್ದಾರೆ ಆದರೆ ಸ್ವರೂಪ ಬದಲಾಗಿದೆ

 `ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ‘ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಜಿ.ಪಿ. ಬಸವರಾಜು

ದಾವಣಗೆರೆ ರಾಜಧಾನಿಯಾಗಬೇಕಿತ್ತು

ದಾವಣಗೆರೆಗೆ ಕರ್ನಾಟಕದ ರಾಜಧಾನಿಯಾಗುವ ಅರ್ಹತೆ ಇದೆ. ಬೇರೆ ಯಾವ ಭಾಷೆಯ ಪ್ರಭಾವಕ್ಕೂ ಒಳಗಾಗದೆ ಅಚ್ಚ ಕನ್ನಡ ಮಾತನಾಡುವವರೇ ಇಲ್ಲಿ ಹೆಚ್ಚಾಗಿದ್ದಾರೆ ಎಂದು ಸಾಹಿತಿ ಜಿ.ಪಿ. ಬಸವರಾಜು ಅಭಿಪ್ರಾಯಿಸಿದರು.

ದಾವಣಗೆರೆಯನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡಲು ರಾಜಕೀಯ ಒತ್ತಡ ತರುವಲ್ಲಿ ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಇದೆ ಎಂಬುದು ನನ್ನ ಭಾವನೆ ಎಂದ ಅವರು, ಈಗಲಾದರೂ ಎಚ್ಚೆತ್ತುಕೊಂಡರೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದರು.

ದಾವಣಗೆರೆ, ಫೆ. 18 – ಓದುಗರಿಲ್ಲ ಎಂದು ಲೇಖಕರು ಕೊರಗುತ್ತಾರೆ.  ಓದುಗರಿದ್ದಾರೆ, ಆದರೆ ಓದುಗರ ಸ್ವರೂಪ  ಬದಲಾಗಿದೆ ಎಂದು ಸಾಹಿತಿ ಜಿ.ಪಿ. ಬಸವರಾಜು ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ನಿನ್ನೆ ಕತೆಗಾರ್ತಿ  ಬಿ.ಟಿ. ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ `ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ‘ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರಕಾಶನಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ದಲ್ಲಿ ಓದುವ ಓದುಗರೂ ಇದ್ದಾರೆ ಎಂದರು.

ಇಂದಿಗೂ ಕುವೆಂಪು, ತೇಜಸ್ವಿ, ಅನಂತ ಮೂರ್ತಿ, ಲಂಕೇಶ್ ಅವರ ಪುಸ್ತಕಗಳನ್ನು ಜನರು ಓದುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರೆಲ್ಲಾ ಹಳೆಯ ತಲೆಮಾರಿನವರು ಎಂದಲ್ಲ, ಇಂದಿನ ಪೀಳಿಗೆಯವರೂ ಹೌದು. ಆದ್ದರಿಂದ ಓದುಗರಿಲ್ಲ ಎಂದು ಭಾವಿಸಬಾರದು ಎಂದು ತಿಳಿಸಿದರು.

ಇಂದು ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ದಮನಿತರು, ಶೋಷಿತರು, ಅಲಕ್ಷಿತ ಸಮು ದಾಯಗಳೆಲ್ಲವೂ ಅಕ್ಷರಸ್ಥರಾಗು ತ್ತಿರುವುದರಿಂದ ಎಲ್ಲರೂ ಬರೆಯಲಾರಂಭಿಸಿದ್ದಾರೆ. ಇಂತಹ ಮುಖ್ಯವಾಹಿನಿಗೆ ಬಾರದ ಸಮುದಾಯಗಳು ಬರೆಯುತ್ತಿದ್ದರೆ ನಮ್ಮ ಗ್ರಹಿಕೆಯೂ ಬದಲಾಗುತ್ತದೆ. ಭಾಷೆಯ ಚೆಲುವೂ ಹೆಚ್ಚುತ್ತದೆ ಎಂದು ಹೇಳಿದರು.

ಸಣ್ಣ ಸಣ್ಣ ಸಮುದಾಯಗಳಿಗೆ ಅವರದ್ದೇ ಆದ ಸಾಂಸ್ಕೃತಿಕ ಸಾವಿರಾರು ವರ್ಷಗಳ ಆಯುಷ್ಯ, ಪರಂಪರೆ, ಮೌಲ್ಯ, ಜೀವನಾನುಭವ ಇರುತ್ತದೆ. ಅದರ ಬಗ್ಗೆ ಅವರೆಲ್ಲಾ ಬರೆಯುವ ಅಗತ್ಯವಿದೆ. ಅಂತಹ ಬರಹಗಳನ್ನು ಸ್ವಾಗತಿಸಬೇಕಿದೆ ಎಂದರು.

ಲೇಖಕಿ ಬಿ.ಟಿ. ಜಾಹ್ನವಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 1996ರಲ್ಲಿ ಮೊದಲ ಕಥಾ ಸಂಕಲನ ಪ್ರಕಟವಾಗಿತ್ತು. ಅಂದಿನಿಂದಲೂ ಕೃತಿ ಬಿಡುಗಡೆ ಸಂಬಂಧ ಸಾಕಷ್ಟು ಅಡೆ-ತಡೆಗಳು ಉಂಟಾಗಿದ್ದವು. ಒಂದು ಹಂತದಲ್ಲಿ ಪ್ರಕಾಶಕರ ವಿರುದ್ಧ ನ್ಯಾಯಾಲಯಕ್ಕೂ ಹೋಗಿ, ನಂತರ ಕೇಸು ವಾಪಾಸ್ ಪಡೆದೆ. ಈ ವೇಳೆ ಬರವಣಿಗೆ ಮೇಲೆ ಜಿಗುಪ್ಸೆ ಉಂಟಾಗಿತ್ತು.

ಓದು ಹಾಗೂ ಬರವಣಿಗೆಯಿಂದ ದೂರವಾಗಬೇಕು ಎಂದುಕೊಂಡಾಗಲೇ ಪ್ರಶಸ್ತಿಗಳು ನನ್ನನ್ನು ಹುಡುಕಿಕೊಂಡು ಬಂದವು. ನನ್ನ ಕಥೆಗಳಿಗೆ ಮನ್ನಣೆ ದೊರೆಯಿತು. ಸ್ನೇಹಿತರು, ಹಿತೈಷಿಗಳ ಒತ್ತಾಸೆ,  ಸಹಕಾರದಿಂದ ಇದೀಗ ಸಮಗ್ರ ಕಥಾ ಸಂಕಲನ ಬಿಡುಗಡೆ ಯಾಗುತ್ತಿರುವುದು ಖುಷಿ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಕೆ.ವಿ. ಅಕ್ಷರ ಹೆಗ್ಗೋಡು ಮಾರ್ಗದರ್ಶನದಲ್ಲಿ ವಿದ್ಯಾ ಅಕ್ಷರ  ಹಾಗೂ ವಾಣಿ ಸತೀಶ್ `ದೂಪ್ದಳ್ಳಿ ಸೆಕ್ಸಿ ದುರುಗ ‘ ರಂಗ ಪ್ರಸ್ತುತಿ ಪಡಿಸಿದರು. 

ಮಾನವ  ಬಂಧುತ್ವ ವೇದಿಕೆ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ  ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ.ರವಿಕುಮಾರ ನೀಹ ಪುಸ್ತಕ ಕುರಿತು ಮಾತನಾಡಿದರು. ಸಾಹಿತಿ ಸೌಮ್ಯ ಕೋಡೂರು, ಕೌದಿ ಪ್ರಕಾಶನದ ಡಾ.ಮಮತ ಉಪಸ್ಥಿತರಿದ್ದರು.  ಪುನೀತ್ ಅರಸ್ ಸ್ವಾಗತಿಸಿದರು. ಡಾ.ಮುರುಗೇಶ್ ಬಾಬು ಪ್ರಾರ್ಥಿಸಿದರು.

error: Content is protected !!