ವೃದ್ಧಾಪ್ಯದ ಹೆದರಿಕೆ ಹೆಚ್ಚಿಸುತ್ತಿರುವ ಆಧುನಿಕ ಸಮಾಜ…

ವೃದ್ಧಾಪ್ಯದ ಹೆದರಿಕೆ ಹೆಚ್ಚಿಸುತ್ತಿರುವ ಆಧುನಿಕ ಸಮಾಜ…

ಮನುಕುಲದ ಇತಿಹಾಸದಲ್ಲಿ ಮೊದಲ ಬಾರಿಗೆ ವೃದ್ಧಾಪ್ಯವನ್ನು ವಿಶೇಷ ಎಂದು ಪರಿಗಣಿಸದ ಸ್ಥಿತಿ ಬರುತ್ತಿದೆ. ಮೊದಲು ವೃದ್ಧಾಪ್ಯ ಎಂಬುದು ಅಪರೂಪದ ಸ್ಥಿತಿಯಾಗಿತ್ತು. ಐಷಾರಾಮಿ ವಿಷಯವಾಗಿತ್ತು. ವೃದ್ಧಾಪ್ಯ ತಲುಪುವವರು ಕೆಲವೇ ಸಂಖ್ಯೆಯಲ್ಲಿದ್ದರು. 

ಆದರೆ, ಈಗ ಜಾಗತಿಕವಾಗಿ 65 ದಾಟುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಶೇ.79ರಷ್ಟು ಮಹಿಳೆಯರು ಹಾಗೂ ಶೇ.70ರಷ್ಟು ಪುರುಷರು 65ರ ಗಡಿ ದಾಟುತ್ತಿದ್ದಾರೆ.

ಇಷ್ಟು ದೀರ್ಘಕಾಲ ಬದುಕಿದರೂ ಸಹ, ಈಗಿನ ಪೀಳಿಗೆಯ ಹಲವರು ವೃದ್ಧಾಪ್ಯವನ್ನು ಅಹಿತಕರ ಹಾಗೂ ಹೆದರಿಕೆ ತರುವಂಥದ್ದು ಎಂದು ಭಾವಿಸುತ್ತಾರೆ. 

ಆದರೆ, ವೃದ್ಧಾಪ್ಯ ಹೇಗಿರುತ್ತದೆ ಎಂಬುದು ತಿಳಿಯದೇ ಇರುವುದೇ ವೃದ್ಧರಾಗುವುದಕ್ಕೆ ಹೆದರಲು ಮೂಲ ಕಾರಣ ಎಂದು ಯೂನಿವರ್ಸಿಟಿ ಆಫ್ ಲಿವರ್‌ಪೂಲ್‌ನ ವೃದ್ಧಾಪ್ಯ ಕುರಿತ ಕೇಂದ್ರದ ಉಪ ನಿರ್ದೇಶಕ ಚಾವೋ ಫಾಂಗ್ ಹಾಗೂ ಬರ್ತ್ ವಿಶ್ವವಿದ್ಯಾಲಯದ ಸಾವು – ಸಮಾಜ ಕೇಂದ್ರದ ಅಲಸ್ಟೇರ್ ಕಾಮಿರಿ ಅಭಿಪ್ರಾಯ ಪಡುತ್ತಾರೆ.

ಸಮಾಜ ಈಗ ಯುವ ಪೀಳಿಗೆ ಹಾಗೂ ಸಾಮರ್ಥ್ಯಗಳ ಕಡೆ ಹೆಚ್ಚು ಗಮನ ಹರಿಸುತ್ತಿದೆ. ಇದರಿಂದಾಗಿ ದುರ್ಬಲ ರಾಗಲು ಯಾರೂ ಬಯಸುತ್ತಿಲ್ಲ. ವೃದ್ಧಾಪ್ಯ ತಡೆಯುವುದು ಹೇಗೆ ಎಂಬ ವಿಚಾರಗಳೇ ಎಲ್ಲೆಡೆ ಕೇಳಿ ಬರುತ್ತಿವೆ. ಹೀಗಾಗಿ ವೃದ್ಧರಾಗುವುದು ಇಷ್ಟವಿಲ್ಲದ ವಿಷಯವಾಗಿದೆ.

ಪಾಶ್ಚಾತ್ಯ ದೇಶಗಳ ಸಾಕಷ್ಟು ಜನರು ವೃದ್ಧರಾಗುತ್ತಿದ್ದೇವೆ ಎಂಬ ಯೋಚನೆಯ ಕಾರಣದಿಂದಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ವೃದ್ಧಾಪ್ಯಕ್ಕೆ ಹೆದರುವ ಹಲವರು ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಹಾಗೂ ಸಾವಿನ ಕುರಿತ ಚಿಂತೆಯಿಂದ ಬಳಲುತ್ತಿದ್ದಾರೆ. ವೃದ್ಧಾಪ್ಯದ ಸಂಕೇತಗಳನ್ನು ಮುಚ್ಚಿಡಲು ಚಡಪಡಿಸುತ್ತಿದ್ದಾರೆ.

ಸಾಕಷ್ಟು ಬಾರಿ ನಾವು ವಯಸ್ಸಾಗುವುದನ್ನು ತಡೆ ಯುವ ಮಾತುಗಳನ್ನು ಕೇಳುತ್ತಿದ್ದೇವೆ. ಅಮೆರಿಕದ 45 ವರ್ಷದ ಉದ್ಯಮಿ ಬ್ರಾನ್ ಜಾನ್ಸನ್ ಅವರು ಮತ್ತೆ 18 ವರ್ಷದ ದೇಹ ಪಡೆಯಲು ಪ್ರತಿ ವರ್ಷ ಲಕ್ಷಾಂತರ ಡಾಲರ್ ಖರ್ಚು ಮಾಡುತ್ತಿದ್ದಾರೆ. 

ವಯಸ್ಸಿನ ದಿಕ್ಕನ್ನು ಉಲ್ಟಾ ಮಾಡುವುದು ಹೊಸ ವಿಷಯವೇನೂ ಅಲ್ಲ. ಜೈವಿಕ ಔಷಧಗಳ ವಲಯ ಮುಂದುವರೆಯುತ್ತಿರುವಂತೆ, ಈ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ.

ಜೀವಕೋಶಗಳ ಉತ್ಪಾದನೆಯಲ್ಲಿ ಬದಲಾವಣೆ ತರುವ ಮೂಲಕ ಜೀವನದ ಅವಧಿ ಹೆಚ್ಚಿಸಬಹುದು ಎಂದು 2019ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ವಂಶವಾಹಿ ಉಪನ್ಯಾಸಕ ಡೇವಿಡ್ ಸಿಂಕ್ಲೇರ್ ಪ್ರತಿಪಾದಿಸಿದ್ದರು. ಡಿ.ಎನ್.ಎ.ದಲ್ಲಿ ಬದಲಾವಣೆ ತರುವ ಮೂಲಕ ವೃದ್ಧಾಪ್ಯ ಸಂಬಂಧದ ಹಾನಿಯನ್ನು ತಡೆಯಬಹುದು. ವಯಸ್ಸನ್ನು ಹಿಮ್ಮುಖವಾಗಿಸಲೂ ಸಾಧ್ಯ ಎಂದಿದ್ದರು. ಈ ಎಲ್ಲ ಹೊಸ ಸಾಧ್ಯತೆಗಳು ವೃದ್ಧಾಪ್ಯದ ಭೀತಿಯನ್ನು ಹೆಚ್ಚಿಸಲು ಕಾರಣವಾಗುತ್ತಿವೆ.

ಆದರೆ, ವೃದ್ಧಾಪ್ಯದ ಕುರಿತು ಈ ಹಿಂದೆ ಜನ ಅಷ್ಟೊಂದು ಹೆದರುತ್ತಿರಲಿಲ್ಲ. ಸಾಕಷ್ಟು ಸಮಾಜಗಳಲ್ಲಿ ವೃದ್ಧರನ್ನು ಜ್ಞಾನಿ ಹಾಗೂ ಪ್ರಮುಖರೆಂದು ಭಾವಿಸಲಾಗುತ್ತಿತ್ತು. ಈಗಲೂ ಕೆಲ ಸಮಾಜಗಳು ಅದೇ ರೀತಿ ಇವೆ. ಆದರೆ, 18ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಸಮಾಜವು ವೃದ್ಧರಿಗೆ ಆದ್ಯತೆ ನೀಡುವುದರ ಕಡೆಯಿಂದ ಉತ್ಪಾದಕತೆಗೆ ಆದ್ಯತೆ ನೀಡುವತ್ತ ಗಮನ ಹರಿಸಿತು. ವೃದ್ಧಾಪ್ಯ ಎಂಬುದು ಅನುತ್ಪಾದಕ ಹಂತ ಎಂಬ ಭಾವನೆ ಮೂಡಲು ಆರಂಭಿಸಿತು.

20ನೇ ಶತಮಾನದ ಆರಂಭದ ನಂತರ ಜಾಗತಿಕವಾಗಿ ಪಿಂಚಣಿ ವ್ಯವಸ್ಥೆಗಳು ಬಲವಾಗುತ್ತಾ ಬಂದಿವೆ. ಆದರೆ, ಸಾಮಾಜಿಕ ಹಾಗೂ ಆರೋಗ್ಯ ಬೇಡಿಕೆಗಳು ಹೆಚ್ಚಾಗುತ್ತಾ ಸಾಗಿದವು. ಮಾಧ್ಯಮ ಗಳು ವೃದ್ಧಾಪ್ಯವನ್ನು ಸಮಾಜಕ್ಕೆ ಹೊರೆ ಎಂದು ಬಿಂಬಿಸಲು ಆರಂಭಿಸಿದವು.

ಇದೆಲ್ಲದರ ಕಾರಣದಿಂದ ವೃದ್ಧರಾಗುವುದು ಎಂದರೆ ಆರೋಗ್ಯದ ಅಪಾಯಗಳ ನಿರ್ವಹಣೆ ಹಾಗೂ ಯುವ ಪೀಳಿಗೆಯ ಅವಲಂಬಿತರು ಎಂಬ ಭಾವನೆ ಬಲವಾಗತೊಡಗಿತು. ಪಾಶ್ಚಾತ್ಯ ದೇಶಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಲು ಆರಂಭಿಸಿತು. ವೃದ್ಧರು ಯುವ ಪೀಳಿಗೆಯಿಂದ ದೂರವಾಗುವ ಪದ್ಧತಿ ಆರಂಭವಾಯಿತು.

ವೃದ್ಧಾಪ್ಯ ಪ್ರಕ್ರಿಯೆಯ ಬಗ್ಗೆ ಜನರು ಹೆದರುತ್ತಿಲ್ಲ. ಆದರೆ, ವೃದ್ಧಾಪ್ಯದಿಂದಾಗಿ ನಾವು ಇದುವರೆಗೂ ಗೊತ್ತಿರದ ಹಾದಿಯಲ್ಲಿ ಸಾಗಬೇಕಾಗುತ್ತದೆ ಎಂದೇ ಅಮೆರಿಕದ ಸಾಕಷ್ಟು ಜನರು ಹೆದರುತ್ತಿ ದ್ದಾರೆ. ವೃದ್ಧರು ಹಾಗೂ ಯುವಕರು ಪ್ರತ್ಯೇಕ ಜೀವನ ಬದುಕುತ್ತಿರುವುದೇ ಇದಕ್ಕೆ ಕಾರಣ.

ವಿಭಕ್ತ ಕುಟುಂಬಗಳು ಹಾಗೂ ಸಾಂಪ್ರದಾಯಿಕ ಮೌಲ್ಯಗಳು ಮರೆಯಾಗುತ್ತಿರುವುದರಿಂದ ಯುವ ಪೀಳಿಗೆಯು ವೃದ್ಧರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಹಾಗೂ ಯುವಕರಿಂದ ಪ್ರತ್ಯೇಕವಾದ ವೃದ್ಧರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಮನುಷ್ಯ ವೃದ್ಧಾಪ್ಯದಲ್ಲಷ್ಟೇ ಅಲ್ಲದೇ, ಪ್ರತಿ ಹಂತದಲ್ಲೂ ಬದಲಾಗುತ್ತಾನೆ. ಬಾಲ್ಯದಿಂದ ಹದಿ ಹರೆಯ, ನಂತರ ಯೌವ್ವನ, ಮಧ್ಯ ವಯಸ್ಸು ಎಲ್ಲವೂ ಬದಲಾವಣೆ ತರುತ್ತದೆ. ಈ ಬದಲಾವಣೆ ಒಂದಲ್ಲಾ ಒಂದು ರೀತಿಯ ಹೆದರಿಕೆ ಹಾಗೂ ಕಳವಳ ತರುವುದು ಸಹಜ.

ಆದರೆ, ವೃದ್ಧಾಪ್ಯ ಸಮಸ್ಯಾತ್ಮಕ ಎಂದು ಭಾವಿಸುವ ಬದಲು ಅದು ಜೀವನದ ಒಂದು ಅವಿಭಾಜ್ಯ ಅಂಗ ಎಂಬುದನ್ನು ಪರಿಗಣಿಸ ಬೇಕಿದೆ. ವೃದ್ಧರಾಗುವುದು ಸಾಮಾನ್ಯ, ಅದರೊಂದಿಗೆ ಬರುವ ಉದ್ವಿಗ್ನತೆಗಳೂ ಸಾಮಾನ್ಯ.

ವೃದ್ಧರಾಗುವುದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸಿದಾಗ, ಅದರೊಂದಿಗೆ ಬರುವ ಚಿಂತೆಗಳೂ ದೂರವಾಗುತ್ತವೆ. ಜೀವನದ ವಿವಿಧ ಹಂತಗಳ ಬದಲಾವಣೆಗಳನ್ನು ಸಹಜವಾಗಿ ಹಾಗೂ ಸಕಾರಾತ್ಮಕವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಇದು ನಮ್ಮ ಜೀವನ ಹಾಗೂ ನಮ್ಮ ಸುತ್ತಲಿನವರ ಜೀವನ ಶ್ರೀಮಂತಗೊಳಿಸುತ್ತದೆ.

error: Content is protected !!