ಕಾಯಕ ಪ್ರಜ್ಞೆ ಸಾರಿದ ಮಹಾಪುರುಷ ಬಸವಣ್ಣ

ಕಾಯಕ ಪ್ರಜ್ಞೆ ಸಾರಿದ ಮಹಾಪುರುಷ ಬಸವಣ್ಣ

ಮರೆಯಲಾಗದ ಮಹಾ ಪುರುಷ 

ಮಡಕೆಯ ಮಾಡುವಡೆ ಮಣ್ಣೇ ಮೊದಲು, 

ತೊಡಿಗೆಯ ಮಾಡುವಡೆ ಹೊನ್ನೇ ಮೊದಲು, 

ಶಿವಪಥವನರಿವಡೆ ಗುರುಪಾದವೇ ಮೊದಲು ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು… 

– ಬಸವಣ್ಣ

ಭಾರತೀಯ ಸಾಂಸ್ಕೃತಿಕ ಚರಿತ್ರೆಯ ಸಂದರ್ಭದಲ್ಲಿ, ವಿಶೇಷವಾಗಿ ಕರ್ನಾಟಕದ ಐತಿಹಾಸಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂದರ್ಭದಲ್ಲಿ, ಸಮಗ್ರತೆಯ ಅರ್ಥದಲ್ಲಿ ಸಾಂಸ್ಕೃತಿಕ ಅನನ್ಯತೆಯ ಅರಿವಿನ ಸಂದರ್ಭದಲ್ಲಿ ಬಸವಣ್ಣನವರನ್ನು ಹೊರತುಪಡಿಸಿದಂತೆ ಮಾತಾಡುವುದಾಗಲೀ, ಚರ್ಚಿಸುವುದಾಗಲೀ ಸುಲಭಕ್ಕೆ ಸಾಧ್ಯವಾಗುವಂತಹುದಲ್ಲ. ಮಾನವೀಯತೆಯ  ಉತ್ಕರ್ಷ ವೆಂಬಂತೆ ವರ್ಣಮಯ ಬದುಕಿನ ಬಸವೇಶ್ವರರು, ಕ್ರಾಂತಿಕಾರಕ ಸಂಘಟನಾಕಾರನಾಗಿ ಬದುಕಿ ಬಾಳಿದವರು. ತನ್ನ ಕಾಲಕ್ಕೆ ಬಹುಪಾಲು ಕರ್ನಾಟಕದ ಮನೋಧರ್ಮವನ್ನು ರೂಪಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. ವಚನ ಕ್ರಾಂತಿಯ ಗ್ರಹಿಕೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಬಸವಣ್ಣನವರಿಂದ ಸಂದ ಗೌರವ ಮತ್ತು ಪ್ರಯೋಗಶೀಲತೆಯ ಅರ್ಥಗಳು ನಿರಂತರವಾದವುಗಳು.

ಬಸವಣ್ಣನವರು ಹನ್ನೆರಡನೇಯ ಶತಮಾನದಲ್ಲಿದ್ದ ಶರಣ ಪ್ರಮುಖ. ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಆತ ತನ್ನ ಬಾಲ್ಯದಲ್ಲಿಯೇ ಉಪನಯನವನ್ನು, ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಕಲ್ಯಾಣಕ್ಕೆ ಹೊರಟನು. ಕಲ್ಯಾಣದಲ್ಲಿ ಬಸವಣ್ಣ ಇದ್ದಷ್ಟು ಕಾಲ ಅವನ ಕಾರ್ಯಕ್ಷೇತ್ರ ವಿಪುಲವಾಗಿ ವಿಸ್ತಾರವಾಯಿತು. ಸಮಾಜದ ಕಲ್ಯಾಣ ಕುರಿತು ಮಾನವೀಯ ನೆಲೆಯ ಅವರ ಚಿಂತನೆಯ ಕಾರಣದಿಂದಲೇ ಕಲ್ಯಾಣದ ಒಳ – ಹೊರಗಿನ ಸಾವಿರಾರು ಶರಣರು ಅವರ ಮಾರ್ಗಕ್ಕೆ ಧಾವಿಸಿ ಬಂದರು. ಸಮಾಜದ ಧಾರ್ಮಿಕ ಸಮಾನತೆಗೆ, ಆಶಯಕ್ಕೆ ನೆರವಾಗಿ ನಿಂತರು. ‘ಅನುಭವ ಮಂಟಪ’ ಸ್ಥಾಪಿತವಾಯಿತು. ‘ಶೂನ್ಯ ಸಿಂಹಾಸನದ’ ಹೊಸ ಆಲೋಚನೆ ಕಾರ್ಯರೂಪಕ್ಕೆ ಬಂದಿತು.

ಮುಕ್ತ ಚರ್ಚೆ, ಸಂವಾದ, ಚಿಂತನೆ, ವಚನ ಕೃಷಿಯಂತಹ  ಕಾರ್ಯ ಸಾಂಗವಾಗಿ ನಡೆಯಿತು. ನುಡಿದಂತೆ ನಡೆಯುವ ಪರಿಪಾಠ ಬೆಳೆಯಿತು. ವರ್ಣ ಸಂಕರರ ಹುಯಿಲಿನ ಮಡಿವಂತರ ನಡುವಿನ ಸಂಘರ್ಷ ಬಹುಶಃ ದೊಡ್ಡದಾಗಿ ಅದು ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಶರಣರೆಲ್ಲಾ ಚದುರಿದರು, ಬಸವಣ್ಣ ಕೂಡಲ ಸಂಗಮಕ್ಕೆ ತೆರಳಿದರು.

ಬಸವಣ್ಣನವರ ವಚನಗಳು ಸಾವಿರಕ್ಕೂ ಅಧಿಕ ದೊರಕಿವೆ.’ ಕೂಡಲ ಸಂಗಮದೇವ’ ಇವರ ವಚನದ ಅಂಕಿತ. ಮೂಲತಃ ಇವು ಸಾಹಿತ್ಯ ಕೃತಿಗಳಾಗುವ ಹಂಬಲದಿಂದ ಉದ್ದೇಶದಿಂದ ರಚಿತವಾದವೆಂದು ಹೇಳುವಂತಿಲ್ಲ. ಜನರ ಬದುಕನ್ನು, ಸಮಾಜವನ್ನು ನೇರ್ಪುಗೊಳಿಸುವ ಪ್ರಯತ್ನದಂತೆ ಕಾಣುತ್ತವೆ. ಇಂತಹ ಪ್ರಯತ್ನಕ್ಕೆ ಬಸವೇಶ್ವರ ಬಳಸಿದ ಭಾಷೆ ಮಧ್ಯಮ ಕನ್ನಡ, ಅಂದರೆ ಜನಭಾಷೆಯ ಧಾಟಿ ಅದು ಶಿಷ್ಟವಾಗಿರಲಿಲ್ಲ. ಕಾಳಜಿಯ, ಸಂವೇದನೆಯ, ಅನುಭವದ ಅರಿವಿನಿಂದ ರೂಪುಗೊಂಡ ಮಹತ್ವದ ಕ್ರಾಂತಿಕಾರಕ ಭಾಷೆಯೆಂದು ಬಸವಣ್ಣನವರ ವಚನ ಭಾಷೆಯನ್ನು ಗುರುತಿಸಬಹುದು. ಅವರ ವೈಯಕ್ತಿಕ ಬದ್ಧತೆ, ಆಚಾರ – ವಿಚಾರ, ತಾವು ಕಂಡ ಸಮಾಜ ಇತ್ಯಾದಿ ಸತ್ಯಗಳನ್ನು ಕುರಿತು ಅವರು ಬರೆದರು. ಸರ್ವರ ಉದಯವನ್ನು ಆ ಅರ್ಥದಲ್ಲಿಯೇ ಕಾಣಲು ಬಯಸಿದರು. ತನ್ಮೂಲಕ ‘ ಭಕ್ತಿ ಭಂಡಾರಿ’ಯೆಂದೂ ಅನ್ವರ್ಥರಾದರು. ಭಕ್ತಿ- ಕರ್ಮಗಳ ಸಮನ್ವಯವಾದ ಬಸವಣ್ಣ ” ಕಾಯಕವೇ ಕೈಲಾಸ” ವೆಂದು ಬದುಕಿದವನು.

`ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ’, ‘ನುಡಿದರೆ ಮುತ್ತಿನ ಹಾರದಂತಿರಬೇಕು’, ‘ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ ಬಾಳುವ’, ‘ನಿಮ್ಮ ನಿಮ್ಮ ಮನವ ಸಂತೈಸಿ ಕೊಳ್ಳಿ’, ‘ಎನ್ನ ಕಾಯವ ದಂಡಿಗೆ ಮಾಡಯ್ಯ’, ‘ನಾಳೆಬಪ್ಪುದು ನಮಗಿಂದೇ ಬರಲಿ’, ‘ ತನು ಕರಗಿ ನೆರೆವ ಸುಖವ ನಾನೇನೆಂಬೆ’, ‘ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು’, ‘ ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಂತೆ’, ‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು’, ‘ದಯವಿಲ್ಲದ ಧರ್ಮವಾವುದಯ್ಯ’, ‘ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?’,  – ಹೀಗೆ ಬಸವಣ್ಣನವರ ವಚನ ಲಹರಿ ವೈವಿಧ್ಯಮಯವಾಗಿ ಸೃಷ್ಟಿಗೊಂಡಿದೆ.

ಒಟ್ಟಾರೆಯಾಗಿ ಬಸವಣ್ಣನವರ ವಚನಗಳ ವಸ್ತು ವಿಸ್ತಾರ ವಾದುದು. ಅದು ಬಹುಶಃ ದೃಷ್ಟಿಯಿಂದ – ಸಮಷ್ಟಿಯೆಡೆಗೆ ಚಲಿಸುವಂತಹುದು. ಅದು ಒಳಗೊಳ್ಳದ ವಿಚಾರ – ವಿಶೇಷಗಳಿಲ್ಲ ವೆಂದರೆ ಉತ್ಪ್ರೇಕ್ಷೆಯಾಗಲಾರದು. ಜ್ಞಾನ, ಭಕ್ತಿ, ಸಂಸಾರ ವಿರಕ್ತಿ, ಆತ್ಮ ನಿರೀಕ್ಷಣೆ, ಆತ್ಮ ದೂಷಣೆ, ಆರ್ತ ಭಕ್ತಿ, ಅಂತರಂಗ ನಿರೀಕ್ಷಣೆ, ಸಾಮಾಜಿಕ ವಿಡಂಬನೆ, ಟೀಕೆ – ವ್ಯಾಖ್ಯಾನ, ಧರ್ಮ- ಮೌಢ್ಯತೆ, ನೀತಿಭೋದೆ, ಉಪದೇಶ ಎಂಬೆಲ್ಲಾ ಆಯಾಮಗಳಲ್ಲಿ ಬಸವಣ್ಣ ನವರ ವಚನಗಳು ಹರಡಿಕೊಂಡಿವೆ. ಸಾಹಿತ್ಯಿಕ, ಸರಳತೆ, ಪ್ರಸನ್ನತೆ, ಲಾಲಿತ್ಯಗಳಿಗೆಲ್ಲಾ ಮುನ್ನುಡಿಯಾದಂತಿರುವ ಇವರ ವಚನಗಳು, ಹೃದಯ ಸಂವಾದದ ರೂಪದಲ್ಲಿ, ಹೃದಯ ಸ್ಪರ್ಶಿಯಾಗಿಯೂ ಸಹೃದಯರನ್ನು ಒಳಗೊಂಡಿವೆ. ತನ್ಮೂಲಕ ಲಿಂಗಾಯತ ಧರ್ಮದ, ವಿಶ್ವ ಧರ್ಮದ, ಮಾನವತೆಯ ಅರ್ಥದ ವಿಚಾರವಂ ತಿಕೆಯ ನೆಲೆಯಿಂದ ಕನ್ನಡ ಸಾಹಿತ್ಯಕ್ಕೆ ವಿಶ್ವ ಸಾಹಿತ್ಯ ಸಂದರ್ಭ ದಲ್ಲಿಯೂ ವಿಶೇಷ ಮನ್ನಣೆ ತಂದುಕೊಡುವ ಶಕ್ತಿ ಪಡೆದಿದೆ.


ಮಾಡೋಳ್ ಗೌಡ್ರು ನಾಗರಾಜ್
ಕುಂದೂರು, ಶಿಕ್ಷಕರು, ದಾವಣಗೆರೆ. 

error: Content is protected !!