ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹ

ದಾವಣಗೆರೆ, ಮೇ 9- ತಾಲ್ಲೂಕಿನ ಆವರಗೊಳ್ಳ ಸಮೀಪದ ಘನ ತ್ಯಾಜ್ಯ ಕಸ ವಿಲೇವಾರಿ ಘಟಕವನ್ನು ತಕ್ಷಣವೇ ಅಲ್ಲಿಂದ ಸ್ಥಳಾಂತರಿಸಲು ಗ್ರಾಮದ ಮುಖಂಡ ಬಿ. ಎಂ. ಷಣ್ಮುಖಯ್ಯ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಕಸ ವಿಲೇವಾರಿ ಘಟಕದಿಂದ ಗ್ರಾಮಸ್ಥರು ನಿತ್ಯವೂ ತೊಂದರೆ ಎದುರಿಸುತ್ತಿದ್ದೇವೆ ಮತ್ತು ಗದ್ದೆಗೆ ಹೋಗುವ ರೈತರಿಗೆ ನಾಯಿಗಳ ಕಾಟ ಹೆಚ್ಚಾಗಿದೆ ಎಂದರು.

ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಕಾರಣ ಹೇಳುತ್ತಾ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.

ನಗರದಿಂದ ದಿನಕ್ಕೆ 200 ಟನ್‌ನಷ್ಟು ಹಸಿ ಹಾಗೂ ಒಣ ಕಸ ಇಲ್ಲಿಗೆ ಬರುತ್ತಿದ್ದು, ಇದನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ ಎಂದ ಅವರು ರೈತರಿಗೆ ಹಿಡಿ ಗೊಬ್ಬರವನ್ನೂ ನೀಡುತ್ತಿಲ್ಲ ಎಂದರು.

ಘಟಕದಲ್ಲಿ ಅಗ್ನಿ ಅವಘಡ ಆದ ಕಾರಣ ಗಾಳಿಗೆ ಹಾರಿ ಬಂದ ಕಿಡಿಯಿಂದ ಭತ್ತದ ಬೆಳೆ ಹಾಗೂ ತೆಂಗಿನ ಗಿಡಗಳು  ಹಾಳಾಗಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿ ಗಳು ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ಗ್ರಾಮದ ಮುಖಂಡ ಬಿ. ವೀರಯ್ಯ, ಡಿ. ಶಶಿಧರಯ್ಯ, ವೀರರಾಜೇಂದ್ರ ಸ್ವಾಮಿ, ಬಸವರಾಜಪ್ಪ, ದೇವರಾಜ್‌ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!