ನಗರದಲ್ಲಿ ಇಂದು ವಿವಿಧೆಡೆಯಲ್ಲಿ ಬಸವ ಜಯಂತ್ಯೋತ್ಸವ

ನಗರದಲ್ಲಿ ಇಂದು ವಿವಿಧೆಡೆಯಲ್ಲಿ ಬಸವ ಜಯಂತ್ಯೋತ್ಸವ

ವಿರಕ್ತಮಠ : ಶ್ರೀ ವಿರಕ್ತ ಮಠದ ವತಿಯಿಂದ ಶಿವಯೋಗಾಶ್ರಮ ವಿರಕ್ತ ಮಠದ ಚರಮೂರ್ತಿಗಳು ಹಾಗೂ ಚಿತ್ರದುರ್ಗ  ಮುರುಘಾ ಮಠದ ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ  ಇಂದು 112ನೇ ಬಸವ ಜಯಂತ್ಯೋತ್ಸವವನ್ನು  ಆಚರಿಸಲಾಗುವುದು. 

ಬೆಳಿಗ್ಗೆ 7.30 ರಿಂದ ಶ್ರೀ ವಿರಕ್ತಮಠ ಲಿಂಗಾಯ ತರುಣ ಸಂಘ ಬಸವಣ್ಣನವರ ಭಾವಚಿತ್ರದೊಂದಿಗೆ, ಬಸವಾದಿ ಶರಣರ ವಚನ ಗ್ರಂಥ ಮೆರವಣಿಗೆಯು   ಶ್ರೀ ವಿರಕ್ತ ಮಠದಿಂದ ಆರಂಭಗೊಂಡು ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜಪೇಟೆ ನಂತರ ಶ್ರೀ ವಿರಕ್ತಮಠ ತಲುಪುವುದು.

ಬೆಳಿಗ್ಗೆ 9.30ಕ್ಕೆ ಶ್ರೀ ವಿರಕ್ತಮಠದಲ್ಲಿ ನಡೆಯುವ ತೊಟ್ಟಿಲು ಕಾರ್ಯಕ್ರಮದಲ್ಲಿ ನವಜಾತ ಶಿಶುಗಳಿಗೆ ನಾಮಕರಣ ಮಾಡಲಾಗುವುದು.

ಬೆಳಿಗ್ಗೆ 10ಕ್ಕೆ ಬಸವ ಜಯಂತಿ ಪ್ರಾರಂಭಿಸಿದ ಶ್ರೀ ಮೃತ್ಯುಂಜಯ ಅಪ್ಪಗಳು ಮತ್ತು  ಶ್ರೀ ಹರ್ಡೇಕರ್ ಮಂಜಪ್ಪನವರ ಸ್ಮರಣೋತೋತ್ಸವ, ಬಸವ ಜಯಂತಿ ಉತ್ಸವದಲ್ಲಿ ಲಿಂಗಾಯತ ತರುಣ ಸಂಘದ ಸಂಚಾಲಕರಾದ ಕಣಕುಪ್ಪಿ ಮುರುಗೇಶಪ್ಪ ಉಪಸ್ಥಿತರಿರುವರು. ಜಾನಪದ ಜಂಗಮ ಗಂಜಿಗಟ್ಟೆ ಕೃಷ್ಣಮೂರ್ತಿ ಅವರಿಂದ ವಚನ ಗಾಯನ ನಡೆಯಲಿದೆ.

ದೊಡ್ಡಪೇಟೆಯ ಬಸವ ಮಂಟಪ : ದೊಡ್ಡಪೇಟೆಯ ಬಸವ ಮಂಟಪದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇಂದು -ನಾಳೆ   ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದ್ದು, ಇಂದು ಬೆಳಿಗ್ಗೆ 9 ಗಂಟೆಗೆ  ತೊಟ್ಟಿಲು ಪೂಜೆ, ಸಂಜೆ 6 ಗಂಟೆಗೆ  ಹೂವಿನ ಅಲಂಕಾರದ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಬಸವೇಶ್ವರ ಬೆಳ್ಳಿ ಪುತ್ಥಳಿಯ ಭವ್ಯ ಮೆರವಣಿಗೆಯು ರಾಜಬೀದಿಗಳಲ್ಲಿ ಜರುಗಲಿದೆ.

ನಾಳೆ ಶನಿವಾರ ಸಾರ್ವಜನಿಕರಿಗೆ ಅನ್ನ ದಾಸೋಹ ಏರ್ಪಡಿಸಲಾಗಿದ್ದು, ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಸಹೋದರರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.

ಬಸವರಾಜಪೇಟೆ : ಬಸವರಾಜಪೇಟೆಯ ಶ್ರೀ ಬಸವೇಶ್ವರ, ಶ್ರೀ ವೀರೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಇಂದು ಬಸವ  ಜಯಂತಿ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ಸ್ವಾಮಿಗೆ ರುದ್ರಾಭಿಷೇಕ ನಡೆಯಲಿದೆ.

ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು, ಸಂಜೆ
6 ಗಂಟೆಗೆ ಬಸವ ಜಯಂತಿ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಮಲ್ಲಪ್ಪ ಬಿರಾದಾರ, ಪ್ರಧಾನ ಕಾರ್ಯದರ್ಶಿ ಎಂ. ದೊಡ್ಡಪ್ಪ ತಿಳಿಸಿದ್ದಾರೆ.

ಕಾಯಿಪೇಟೆ : ಕಾಯಿಪೇಟೆಯ ಶ್ರೀ ಬಸವೇಶ್ವರ ನಗರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇಂದು – ನಾಳೆ ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ. ಇಂದು ಬೆಳಿಗ್ಗೆ 7 ರಿಂದ 9ರ ವರೆಗೆ ತೊಟ್ಟಿಲು ಪೂಜೆ, ಸಂಜೆ 5 ಗಂಟೆಗೆ  ವಿದ್ಯುತ್ ಅಲಂಕೃತ ಭವ್ಯವಾದ ಹೂವಿನ ಮಂಟಪದಲ್ಲಿ ಶ್ರೀ ಬಸವೇಶ್ವರ ಮೂರ್ತಿಯ ಮೆರವಣಿಗೆ ರಾಜಬೀದಿಗಳಲ್ಲಿ ಜರುಗಲಿದೆ.

ನಾಳೆ ಶನಿವಾರ ಸರ್ವ ಭಕ್ತಾದಿಗಳಿಗೆ
ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!