ನಗರದ ಕೆ.ಆರ್. ಮಾರುಕಟ್ಟೆಯ ಮಳಿಗೆಗಳ ಪುನರಾರಂಭ ಇಂದು

ದಾವಣಗೆರೆ, ಮೇ 9 – ನಗರದ ಶ್ರೀ ಕೃಷ್ಣ ರಾಜೇಂದ್ರ ತರಕಾರಿ ಮಾರುಕಟ್ಟೆ ವರ್ತಕರ ಸಂಘದ ವತಿಯಿಂದ ನಾಳೆ ದಿನಾಂಕ 10ರ ಶುಕ್ರವಾರ ಕೆ.ಆರ್. ಮಾರುಕಟ್ಟೆಯ ನೂತನ ಸಂಕೀರ್ಣದಲ್ಲಿ ವಿಶೇಷ ಪೂಜೆ, ವಾಸ್ತು ಶಾಂತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಐರಣಿ ಬಕ್ಕೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹವನ ಪೂಜೆಯೊಂದಿಗೆ ಮಳಿಗೆಗಳನ್ನು ಪುನರ್ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ವತಿಯಿಂದ ಈ ಸಂಕೀರ್ಣ ನಿರ್ಮಿಸಲಾಗಿದೆ. ಒಟ್ಟು 254 ಮಳಿಗೆಗಳು ಸಿದ್ಧವಾಗಿವೆ. 95 ಜನ ಮೂಲ ಮಳಿಗೆಗಾರರಿಗೆ ಮಳಿಗೆ ದೊರೆತಿವೆ ಎಂದು ಬಕ್ಕೇಶ್ ಹೇಳಿದರು.

ಸಂಘದ ಖಜಾಂಚಿ ಟಿ.ಎಂ. ಚಂದ್ರಮೋಹನ್ ಮಾತನಾಡಿ, ನೆಲ ಮಹಡಿ ಹಾಗೂ ಮೊದಲ ಮಹಡಿಯಲ್ಲಿ 9×9 ಅಡಿಯ ಮಳಿಗೆಗಳನ್ನು ನಿರ್ಮಿಸಿ ವಿತರಿಸಲಾಗುತ್ತಿದೆ. ರಾಂಪ್ ನಿರ್ಮಾಣ ಇನ್ನೂ ಪೂರ್ಣಗೊಳ್ಳದ ಕಾರಣ, ಎರಡನೇ ಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಗುತ್ತಿಲ್ಲ ತಿಳಿಸಿದರು.

ಈ ಹಿಂದಿನ ಮಾರುಕಟ್ಟೆಯಲ್ಲಿ ಹಣ್ಣು – ಹೂವು, ತರಕಾರಿ, ದಿನಸಿ ಸೇರಿದಂತೆ ವಿವಿಧ ವ್ಯಾಪಾರಿಗಳಿಗೆ ಅನುಕೂಲ ಇತ್ತು. ಈಗ ಎಲ್ಲರಿಗೂ ಏಕರೂಪದ ಸಣ್ಣ ಗಾತ್ರದ ಮಳಿಗೆಗಳು ದೊರೆತಿರುವುದು ಸಮಸ್ಯೆ ತಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎಂ.ಜಿ. ನಾಗರಾಜ, ಪಿ. ರುದ್ರೇಶ್, ಜಿ.ಎಸ್. ದಾನೇಶಪ್ಪ, ಪಿ. ಶಿವಾನಂದಪ್ಪ, ಎಲ್. ಮುರುಗೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!