ಅಡಿಕೆ ಆಮದು ನಿಷೇಧ, ರಫ್ತುಗೆ ಉತ್ತೇಜನ ಶಾಂತಿಸಾಗರ ಅಭಿವೃದ್ಧಿಗೆ ಕ್ರಮ : ಪ್ರಭಾ ಎಸ್ಸೆಸ್ಸೆಂ

ಅಡಿಕೆ ಆಮದು ನಿಷೇಧ, ರಫ್ತುಗೆ ಉತ್ತೇಜನ  ಶಾಂತಿಸಾಗರ ಅಭಿವೃದ್ಧಿಗೆ ಕ್ರಮ : ಪ್ರಭಾ ಎಸ್ಸೆಸ್ಸೆಂ

ಚನ್ನಗಿರಿ, ಏ. 24 – ದಾವಣಗೆರೆ ಜಿಲ್ಲೆಯಲ್ಲಿ ಅತಿಹೆಚ್ಚು ಅಡಿಕೆ ಬೆಳೆ ಪ್ರದೇಶ ಚನ್ನಗಿರಿ ತಾಲ್ಲೂಕು ಅಡಿಕೆ ನಾಡು ಎಂದು ಪ್ರಸಿದ್ದಿ ಆಗಿದ್ದು, ಇಂತಹ ಪ್ರದೇಶಕ್ಕೆ ಕಳಂಕ ಬರುವಂತೆ ಕೇಂದ್ರ ಸರ್ಕಾರ ಮತ್ತು ಈ ಜಿಲ್ಲೆಯ ಲೋಕಸಭಾ ಪ್ರತಿನಿಧಿ ನಡೆದುಕೊಂಡಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆರೋಪಿಸಿದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು, ಕೊಗಲೂರು, ದೊಡ್ಡ ಮಲ್ಲಾಪುರ, ಕರೇಕಟ್ಟೆ, ಸೋಮಲಾಪುರ, ಕಾಕನೂರು, ನುಗ್ಗಿಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ, ಹೆಬ್ಬಳಗೆರೆ, ಹೊದಿಗೆರೆ, ಗರಗ, ದೇವರಹಳ್ಳಿ, ಕಗತೂರು, ಬುಳಸಾಗರ, ಇಟ್ಟಿಗೆ, ಲಿಂಗದಹಳ್ಳಿ, ನಲ್ಲೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಚನ್ನಗಿರಿ ತಾಲ್ಲೂಕಿನಾದ್ಯಂತ ಅಡಿಕೆ ಬೆಳೆ ಬಂಪರ್ ಆಗಿ ಬೆಳೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಅಡಿಕೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿತು. ಇದಕ್ಕೆ ಸಂಸದರು ಕನಿಷ್ಠ ಪಕ್ಷ ವಿರೋಧ ಸಹ ವ್ಯಕ್ತಪಡಿಸಲಿಲ್ಲ. ಇಂತಹ ಸಂಸದರು ನಿಮಗೆ ಬೇಕಾ ಎಂದು ಪ್ರಶ್ನಿಸಿದರು.

ಈ ಬಾರಿ ದೇಶದಲ್ಲಿ ಬದಲಾವಣೆ ಖಂಡಿತ ಆಗಲಿದ್ದು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಅಧಿಕಾರ ಹಿಡಿಯಲಿದ್ದು, ನಮ್ಮ ಸರ್ಕಾರದಲ್ಲಿ ಅಡಿಕೆಗೆ ಸ್ಥಿರ ಬೆಲೆ ಕೊಡಿಸುವುದು, ಅಡಿಕೆ ಸಂಸ್ಕರಣಾ ಘಟಕ ಆರಂಭಿಸುವುದು ಸೇರಿದಂತೆ ಅಡಿಕೆಗೆ ಪೂರಕವಾದ ವಾತಾವರಣ ನಿರ್ಮಿಸುತ್ತೇವೆ ಎಂದರು.

ಶಾಸಕ ಶಿವಗಂಗಾ ಬಸವರಾಜ್ ಅವರ ಸಹಕಾರದಿಂದ ಚನ್ನಗಿರಿ ಸುತ್ತಮುತ್ತ ರೈತರಿಗೆ ಸಮರ್ಪಕವಾದ ರಸ್ತೆಗಳ ನಿರ್ಮಾಣ ಹಾಗೂ ಏಷ್ಯಾದ ಅತಿದೊಡ್ಡ ಶಾಂತಿ ಸಾಗರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇಂದು ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.177 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.

ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು  ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಶಾಸಕ ಶಿವಗಂಗಾ ಬಸವರಾಜ್, ಬ್ಲಾಕ್ ಅಧ್ಯಕ್ಷ ಜಬಿವುಲ್ಲಾ, ಶ್ರೀನಿವಾಸ್, ಪಕ್ಷದ ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್ ನಾಯ್ಕ, ವಡ್ನಾಳ್ ಜಗದೀಶ್, ಶಿವಗಂಗಾ ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!