ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ

ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ

ಬಿಜೆಪಿ ಯುವ ಮೋರ್ಚಾ, ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ

ದಾವಣಗೆರೆ, ಏ.22- ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಮಾಡಿದ ಹಂತಕನಿಗೆ ಶೀಘ್ರ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸೋಮವಾರ ಬಿಜೆಪಿಯ ಯುವ, ಮಹಿಳಾ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಇಂದು ನಡೆದ ಪ್ರತಿಭಟನೆ ಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ  ನೇಹಾ ಹಿರೇಮಠ್ ಅವರ ಹತ್ಯೆ ಖಂಡಿಸಿದರು.

ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು, ನೇಹಾ ಕೊಲೆ ಮಾಡಿದ ಆರೋಪಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರವು ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದೂಗಳ ರಕ್ಷಣೆಯನ್ನೂ ಬಿಜೆಪಿಯವರೇ ಮಾಡಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಡಿ.ಕೆ ಶಿವಕುಮಾರ್ ಇವರು ಅಲ್ಪಸಂಖ್ಯಾತರ ಮತಗಳಿಗಾಗಿ ಹಿಂದೂಗಳ ಬೆಂಬಲಕ್ಕೆ ನಿಲ್ಲುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವೇ ಕಾಂಗ್ರೆಸ್ ಹಿಂದೂಗಳನ್ನು ರಕ್ಷಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ನೇಹಾ ಹತ್ಯೆ ಖಂಡನೀಯ. ಕೂಡಲೇ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಬಿಟ್ಟು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ,  ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಪಾಲಿಕೆ ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಶಿವಾನಂದ್,  ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್, ಮುಖಂಡರುಗಳಾದ ಲೋಕಿಕೆರೆ ನಾಗರಾಜ್, ದೇವರಮನೆ ಶಿವಕುಮಾರ್, ಎಸ್.ಎನ್. ಆನಂದ ಹಿರೇಮಠ, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್, ರಮೇಶ್ ನಾಯ್ಕ, ಗುರುನಾಥ್,  ವೀರಭದ್ರಸ್ವಾಮಿ, ಐರಣಿ ಅಣ್ಣೇಶ್, ಅನಿಲ್ ಕುಮಾರ್ ನಾಯ್ಕ, ಶ್ಯಾಗಲೆ ದೇವೇಂದ್ರಪ್ಪ, ಆನಂದರಾವ್ ಶಿಂಧೆ, ಸಂಗನಗೌಡ್ರು, ನೆಲಹೊನ್ನೆ ಮಂಜಣ್ಣ, ರಮೇಶ್ ನಾಯ್ಕ ಎ.ಸಿ. ರಾಘವೇಂದ್ರ, ಜಿ.ಎಸ್. ಶ್ಯಾಮ್, ಭಾಗ್ಯ ಪಿಸಾಳೆ, ಪುಷ್ಪಾ ವಾಲಿ, ರೇಣುಕಾ ಕೃಷ್ಣ, ಸರ್ವಮಂಗಳಮ್ಮ, ಕಲಾವತಿ, ಮಂಜುಳ, ಚೇತನಾ ಕುಮಾರ್, ನೀತಾ ನಂದೀಶ್, ಸವಿತಾ ರವಿಕುಮಾರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.

error: Content is protected !!