ಬೈರನಪಾದ ಏತ ನೀರಾವರಿ ಜಾರಿಗೆ ಆದ್ಯತೆ

ಬೈರನಪಾದ ಏತ ನೀರಾವರಿ ಜಾರಿಗೆ ಆದ್ಯತೆ

ಹರಿಹರ : ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ 

ರೈತರ ನೀರಿನ ಸಮಸ್ಯೆಗೆ ಪರಿಹಾರ, ಕೈಗಾರಿಕೆ ಸ್ಥಾಪನೆಗೆ ಒತ್ತು

ಹರಿಹರ, ಏ.21- ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ಅನುಕೂಲವಾಗಿಸುವ ಸಂಪೂರ್ಣ ನೀರಾವರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಇಂದು ಬೆಳಿಗ್ಗೆ  ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು, ಸಾಲಕಟ್ಟೆ, ದೇವರಬೆಳಕೆರೆ, ಕಡ್ಲೆಗೊಂದಿ, ಸಲಗನಹಳ್ಳಿ, ಕೆ.ಬೇವಿನಹಳ್ಳಿ, ಬನ್ನಿಕೋಡು, ಷಂಶೀಪುರ, ಬೆಳ್ಳೂಡಿ, ಬ್ಯಾಲದಹಳ್ಳಿ, ಎಕ್ಕೆಗೊಂದಿ, ಭಾನುವಳ್ಳಿ, ರಾಯಪುರ, ರಾಮತೀರ್ಥ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ, ಯಲವಟ್ಟಿ, ಸಿರಿಗೆರೆ, ಕಡರನಾಯಕನಹಳ್ಳಿ, ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ನಾನೂ ಸಹ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಹರಿಹರ ತಾಲ್ಲೂಕಿಗೆ ಹೊಂದಿಕೊಂಡಿರುವ ಕಕ್ಕರಗೊಳ್ಳ ಗ್ರಾಮದವರಾಗಿದ್ದು, ಕೊನೆ ಭಾಗದ ರೈತರ ಸಮಸ್ಯೆ ತಿಳಿದಿದ್ದೇನೆ. ದಾವಣಗೆರೆ, ಹರಿಹರ ಮತ್ತು ಹರಪನಹಳ್ಳಿ ತಾಲ್ಲೂಕಿನ ಕೊನೆ ಭಾಗಕ್ಕೆ ನೀರು ಹರಿಸಲು ಸತತ ಪ್ರಯತ್ನ ನಡೆಸಲಾಗುವುದು. ಜೊತೆಗೆ ಹರಿಹರ ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಭೈರನಪಾದ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಲಾಗುವುದು ಮತ್ತು ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆಯನ್ನೂ ಜಾರಿಗೊಳಿಸುತ್ತೇವೆ ಎಂದರು.

ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ರಸಗೊಬ್ಬರ ಕಾರ್ಖಾನೆಯನ್ನು ಮತ್ತು ಎಥೆನಾಲ್ ಉತ್ಪಾದನಾ ಘಟಕವನ್ನು ಆರಂಭಿಸಲು ಹೋರಾಟ ಮಾಡಲಾಗುವುದು. ಈ ಮೂಲಕ ಹರಿಹರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹರಿಹರದಲ್ಲಿ ಎಲೆಪೆಂಡಿ (ವೀಳೈದೆಲೆ) ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೇ ರೈತರು ಮತ್ತು ವ್ಯಾಪಾರಸ್ಥರಿಗೆ ಅನಾನುಕೂಲವಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲೆಪೆಂಡಿಗೆ (ವೀಳೈದೆಲೆ) ಬೇಡಿಕೆ ಇದ್ದು, ರಫ್ತು ಮಾರಾಟಕ್ಕೆ ಉತ್ತೇಜನ ನೀಡಲಾಗುವುದು ಎಂದರು.

ಈ ಭಾಗದ ಜನರು ನಮ್ಮ ಕುಟುಂಬದ ಮೇಲೆ ಸಾಕಷ್ಟು ಭರವಸೆ ಹೊಂದಿದ್ದು, ಅದನ್ನು ನಾವು ಹುಸಿಗೊಳಿಸುವುದಿಲ್ಲ. ನಮ್ಮ ಮೇಲೆ ನಿಮ್ಮ ಆಶೀರ್ವಾದ ಇದ್ದರೆ ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ನಾವು ಮಾಡಿ ತೋರಿಸುತ್ತೇವೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ ಭರವಸೆಗಳ ಕುರಿತು ಮತದಾರರಿಗೆ ಮಾಹಿತಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವಂತೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಕ್ಷೇತ್ರಕ್ಕೆ ಹಾಲಿ ಸಂಸದರ ಕೊಡುಗೆ ಶೂನ್ಯವಾಗಿದ್ದು ಅಭಿವೃದ್ಧಿ ಪರ ಚಿಂತನೆ ಹೊಂದಿರುವ ಡಾ. ಪ್ರಭಾ ಅವರನ್ನು ಗೆಲ್ಲಿಸಿದರೆ ಜಿಲ್ಲೆಗೆ ಹೊಸ ಹೊಸ ಯೋಜನೆಗಳು ಜಾರಿಗೆ ಬರಲಿವೆ ಎಂಬ ವಿಶ್ವಾಸ ನಮಗಿದೆ ಎಂದರು. 

ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ನೀಡಿದಂತಹ ಗ್ಯಾರೆಂಟಿ ಭರವಸೆಯನ್ನು ಈಗಾಗಲೇ ಈಡೇರಿಸಿ ಜನರ ನಂಬಿಕೆಗೆ ಪಾತ್ರವಾಗಿದೆ.

ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರ ಬಂದರೆ ಬಡವರ ಪರ, ದೀನ ದಲಿತ, ರೈತರಿಗೆ, ಕೂಲಿ ಕಾರ್ಮಿಕ, ನಿರುದ್ಯೋಗಿ ಯುವಕ ಯುವತಿಯರಿಗೆ, ಸೇರಿದಂತೆ ಎಲ್ಲರಿಗೂ ಸಹ ಅನುಕೂಲವಾಗುವಂತಹ ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ತಿಳಿಸಿದರು

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಎಂ .ವಾಗೀಶ್‍ ಸ್ವಾಮಿ ಮಾತನಾಡಿ, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವು ಸೂರ್ಯನಷ್ಟೇ ಸತ್ಯ ವಾಗಲಿದ್ದು ಪಕ್ಷದ ಮುಖಂಡರು, ಕಾರ್ಯಕರ್ತರು ಬೂತ್ ಮಟ್ಟದಿಂದ ಕೆಲಸ ಮಾಡೋಣ ಎಂದರು. 

ಮಾಜಿ ಸಚಿವ ಡಾ. ವೈ. ನಾಗಪ್ಪನವರ ಪುತ್ರಿ ಡಾ ರಶ್ಮಿ ಮಾತನಾಡಿ, ಡಾ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಸಾಮಾಜಿಕ ಕಳಕಳಿ ಇದ್ದು, ಅವರ ಆಯ್ಕೆ ನಮ್ಮ ಜಿಲ್ಲೆಗೆ ವರದಾನವಾಗಲಿದೆ ಎಂದರು. 

ಮುಖಂಡ ಹೆಚ್. ಎಸ್. ನಾಗರಾಜ್, ದೇವರಬೆಳಕೆರೆ ರುದ್ರಪ್ಪ, ಕಡ್ಲೆಗೊಂದಿ ಹನುಮಂತರೆಡ್ಡಿ, ಗುಬ್ಬಿ ರಂಗನಾಥ್, ಭಾನುವಳ್ಳಿ ಕನ್ನಪ್ಪ, ಬೆಳ್ಳೂಡಿ ಬಸವರಾಜ್, ನಂದಿತಾವರೆ ತಿಮ್ಮನಗೌಡ ಮಾತನಾಡಿದರು. 

ಈ ಸಂದರ್ಭದಲ್ಲಿ  ಜಿ ಪಂ ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ಅಬೀದ್ ಅಲಿ, ಎಲ್ ಬಿ ಹನುಮಂತಪ್ಪ, ಮುಖಂಡರಾದ ಬಿಳಸನೂರು ತಿಪ್ಪೇರುದ್ರರೆಡ್ಡಿ, ಕುಂಬಳೂರು ವಿರೂಪಾಕ್ಷಪ್ಪ, ಜಿ ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಸಿರಿಗೆರೆ ರಾಜಣ್ಣ, ಬಿ. ವೀರಯ್ಯ, ಬಿ. ಮಹಾರುದ್ರಪ್ಪ, ವೈ. ದ್ಯಾವಪ್ಪರೆಡ್ಡಿ, ಸುರೇಶ್ ಹಾದಿಮನಿ, ಹನಗವಾಡಿ ಕುಮಾರ್, ಎಬಿಎಂ ವಿಜಯ ಕುಮಾರ್, ಎಸ್. ಜಿ. ಪರಮೇಶ್ವರಪ್ಪ, ನಂದಿಗಾವಿ ತಿಪ್ಪೇಸ್ವಾಮಿ, ಆರ್. ಟಿ ಪ್ರಶಾಂತ್, ಶಾಮನೂರು ಎಸ್.ಜಿ.ವೇದಮೂರ್ತಿ, ಧನ್ಯ ಶಾಮನೂರು, ಕೆ. ಪಿ. ಗಂಗಾಧರ್, ಚಿಟ್ಟಕ್ಕಿ ನಾಗರಾಜ್, ಸೈಯದ್ ಜಾಕೀರ್, ಸಜ್ಜು, ಪಿ ಆರ್ ಕುಮಾರ್, ಭೋವಿ ಕುಮಾರ್, ಪಿ. ಹೆಚ್. ಶಿವಕುಮಾರ್, ಯೂನುಸ್, ಎಳೆಹೊಳೆ ಕುಮಾರ್, ಡಿ. ಕೆ. ಸಿದ್ದನಗೌಡ, ಕುಣೆಬೆಳಕೆರೆ ರುದ್ರಪ್ಪ ಸವಿತಾ ನಾಯ್ಕ್, ಮಿಟ್ಲಕಟ್ಟೆಯ ಬಿ .ಹೆಚ್.ವಿಶ್ವನಾಥ್, ಬಣಕಾರ ಚಂದ್ರಪ್ಪ, ಸುರೇಶ್, ಚಿತ್ರ ಸುರೇಶ್ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!