ಭದ್ರಾ ನಾಲೆಯಲ್ಲಿ 25ರವರೆಗೆ ನೀರು ಹರಿಸುವ ಸಾಧ್ಯತೆ

ಭದ್ರಾ ನಾಲೆಯಲ್ಲಿ 25ರವರೆಗೆ ನೀರು ಹರಿಸುವ ಸಾಧ್ಯತೆ

ರೈತರ ನಿಯೋಗಕ್ಕೆ ಭರವಸೆ

ಮೇ 30 ರವರೆಗೆ ನೀರು ಮುಂದುವರೆಸಿ : ಶಾಸಕ ಹರೀಶ್‌ ಒತ್ತಾಯ

ಮಲೇಬೆನ್ನೂರು, ಮೇ 18- ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಭದ್ರಾ ಬಲದಂಡೆ ನಾಲೆಯಲ್ಲಿ ಮೇ 25 ರವರೆಗೆ ನೀರು ಹರಿಸುವುದನ್ನು ಮುಂದುವ ರೆಸುವುದಾಗಿ ಭದ್ರಾ ಅಧೀಕ್ಷಕ ಅಭಿಯಂತ ರರಾದ ಸುಜಾತ ಅವರು ಭರವಸೆ ನೀಡಿದ್ದಾರೆ ಎಂದು ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ತಿಳಿಸಿದರು.

ಗುರುವಾರ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರ ನಿಯೋಗ ಬಿಆರ್‌ಪಿಯಲ್ಲಿರುವ ಭದ್ರಾ ಎಸ್‌ಇ ಕಛೇರಿಯಲ್ಲಿ ಸುಜಾತ ಅವರನ್ನು ಭೇಟಿ ಮಾಡಿ ಕೊನೆ ಭಾಗದಲ್ಲಿ ಭತ್ತದ ಬೆಳೆ ಈಗ ಕಾಳು ಕಟ್ಟಿದ್ದು, ಕನಿಷ್ಠ ಮೇ 30 ರವರೆಗೂ ನೀರು ಮುಂದುವರೆಸಿ ಎಂದು ಮನವರಿಕೆ ಮಾಡಿಕೊಟ್ಟರು.

ರೈತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುಜಾತ ಅವರು ಮೇ 30ರ ವರೆಗೆ ನೀರು ನಾಲೆಯಲ್ಲಿ ನೀರು ಮುಂದುವರಿಸುವ ಬಗ್ಗೆ ನೀರಾವರಿ ನಿಗಮದ ಎಂ.ಡಿ. ಅವರಿಗೆ ಪತ್ರ ಬರೆಯುತ್ತೇನೆ. ಸದ್ಯ ನಾಲೆಯಲ್ಲಿ ನೀರು ನಿಲ್ಲಿಸುವುದಿಲ್ಲ. ಅಲ್ಲಿಂದ ಯಾವ ನಿರ್ದೇಶನ ಬರುತ್ತದೆಂಬುದನ್ನು ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ರೈತರಿಗೆ ತಿಳಿಸಿದರು.

ಮೂಲಗಳ ಪ್ರಕಾರ  ಮೇ 25 ರವರೆಗೆ ನಾಲೆ ನೀರು ಹರಿಸುವ ಸಾಧ್ಯತೆ ಇದೆ ಎಂದು ವೈ. ದ್ಯಾವಪ್ಪ ರೆಡ್ಡಿ `ಜನತಾವಾಣಿ’ಗೆ ಮಾಹಿತಿ ನೀಡಿದರು.

ಹೊಳೆಸಿರಿಗೆರೆಯ ರುದ್ರಪ್ಪ, ನಂದಿತಾವರೆ ಮುರುಗೇಂದ್ರಯ್ಯ, ಕೆ.ಎನ್‌. ಕುಮಾರ್‌, ನಿಟ್ಟೂರಿನ ಬಿ. ಜಿ. ಧನಂಜಯ, ಕುಣೆಬೆಳಕೆರೆ ಭೋವಿ ಅಂಜಿನಪ್ಪ, ಮಡಿವಾಳರ ಮಲ್ಲೇಶಪ್ಪ, ನಂದೀಶ್ವರ ಕ್ಯಾಂಪಿನ ಬ್ರಹ್ಮಣ್ಣ, ಭಾನುವಳ್ಳಿಯ ನಾರಾಯಣಪ್ಪ, ರಂಗನಾಥ್‌, ಪ್ರಶಾಂತ್‌ ಸೇರಿದಂತೆ ನೂರಾರು ರೈತರು ನಿಯೋಗದಲ್ಲಿದ್ದರು.

ಹರೀಶ್‌ ಒತ್ತಾಯ : ಭದ್ರಾ ಬಲದಂಡೆ ನಾಲೆಯಲ್ಲಿ ಮೇ 30 ರವರೆಗೆ ನೀರು ಮುಂದುವರಿಸುವಂತೆ ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್‌ ಅವರು ಗುರುವಾರ ಭದ್ರಾ ಎಸ್‌ಇ ಮತ್ತು ಸಿಇಗೆ ಒತ್ತಾಯಿಸಿದ್ದಾರೆ. 

ಅಚ್ಚುಕಟ್ಟಿನ ಕೊನೆಯ ಭಾಗದಲ್ಲಿ ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದು, ಈಗ ನೀರು ನಿಲ್ಲಿಸುವುದರಿಂದ ಸಾವಿರಾರು ರೈತರ ಬೆಳೆಹಾನಿಯಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಾಲೆಯಲ್ಲಿ ನೀರು ಬಂದ್‌ ಮಾಡದೇ ಮೇ 30 ರವರೆಗೆ ನೀರು ಮುಂದುವರೆಸುವಂತೆ ಪತ್ರ ಮುಖೇನ ಹರೀಶ್‌ ಒತ್ತಾಯಿಸಿದ್ದಾರೆ.

error: Content is protected !!