ಭಾರತ ವಿಶ್ವ ಗುರುವಾಗಲು ಮೌಲ್ಯಾಧಾರಿತ ಶಿಕ್ಷಣ ಅಗತ್ಯ

ಶಿಕ್ಷಣ ಶಿಲ್ಪಿ ಎಂ.ಎಸ್. ಶಿವಣ್ಣ ತರಬೇತಿ ಕೇಂದ್ರ, 10x plus  ಶಿಬಿರ ಉದ್ಘಾಟಿಸಿದ  ಸಚಿವ ಬಿ.ಸಿ. ನಾಗೇಶ್

ಬಿಲ್ವಿದ್ದೆ ತರಬೇತಿ ಮತ್ತು 10ಎಕ್ಸ್‌ಪ್ಲಸ್

ಏಕಾಗ್ರತೆಯಿಂದೇ ಏಕಲವ್ಯ ಹಾಗೂ ಅರ್ಜುನ ಬಿಲ್ವಿದ್ದೆ ಕಲಿತು,  ಶಬ್ಧ ಕೇಳಿದ ಕಡೆ ಬಾಣ ಪ್ರಯೋಗಿಸುವ ಪರಿಣಿತಿ ಪಡೆದಿದ್ದರು. ಇಂತಹ ಪ್ರಯೋಗಗಳನ್ನು  ಭಾರತ ಸಹಸ್ರಾರು ವರ್ಷಗಳಿಂದಲೇ ಮಾಡಿದ ಇಂತಹ ಪ್ರಯೋಗಗಳು ಕಟ್ಟು ಕಥೆಯಲ್ಲ. ನಿಜ ಎಂಬುದನ್ನು ಸಿದ್ಧಗಂಗಾ ವಿದ್ಯಾಸಂಸ್ಥೆ ಟೆನ್‌ಎಕ್ಸ್‌ಪ್ಲಸ್ ತರಬೇತಿ ಮೂಲಕ ಸಾಬೀತು ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.

ದಾವಣಗೆರೆ, ಅ.28 – ಮೌಲ್ಯಾಧಾರಿತ ಶಿಕ್ಷಣದಿಂದ ಭಾರತವನ್ನು ಮತ್ತೊಮ್ಮೆ ವಿಶ್ವಗುರುವಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೊಂಡಜ್ಜಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಿಕ್ಷಣ ಶಿಲ್ಪಿ ಎಂ.ಎಸ್. ಶಿವಣ್ಣ ತರಬೇತಿ ಕೇಂದ್ರ ಹಾಗೂ 10x plus  ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಸಾವರ್ಕರ್ ಅವರುಗಳೂ ಸಹ ಮೌಲ್ಯಾಧಾರಿತ ಶಿಕ್ಷಣವನ್ನು ಪ್ರತಿಪಾದಿಸಿದ್ದರು. ಅದೀಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಯಿಂದ ನಡೆಯುತ್ತಿದೆ. ತನ್ನಿಚ್ಚೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ಕಲಿಯುವ  ಪೂರ್ಣ ಸ್ವಾತಂತ್ರ್ಯ ನೂತನ ಶಿಕ್ಷಣ ನೀತಿಯಲ್ಲಿದೆ ಎಂದು ಹೇಳಿದರು.

ಓರ್ವ ವ್ಯಕ್ತಿ ತನ್ನ ಖುಷಿಯಂತೆ ಶಿಕ್ಷಣ ಪಡೆದು, ಇತರರಿಗೂ ಹಂಚುವ ಮೂಲಕ ಸಾಧನೆಯಲ್ಲಿ ಸಾಮಾಧಾನ ಕಾಣುವ ವ್ಯವಸ್ಥೆ ನಮ್ಮ ಭಾರತ ದೇಶದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಣ ಸಿಗುವ ನೌಕರಿಗಾಗಿಯೇ ಶಿಕ್ಷಣ ಎಂಬಂತಾಗಿದೆ. ಈ ನಿಟ್ಟಿನಲ್ಲಿ ಸಂಕುಚಿತ ವಾಗಿ ವಿಷಯಗಳ ಬೋಧನೆ ನಡೆಸಲಾಗುತ್ತಿತ್ತು ಎಂದರು.

ಮನುಷ್ಯನನ್ನು ಶಿಕ್ಷಣದ ಮೂಲಕ ಪರಿ ಪೂರ್ಣನನ್ನಾಗಿ ಮಾಡುವ ಪ್ರಯತ್ನವೇ  ಭಾರತದ ಶಿಕ್ಷಣದ ವಿಶೇಷತೆ. ಸಾಮಾನ್ಯ ಮನುಷ್ಯನಲ್ಲಿ ಇರುವ ಅಸಮಾನ್ಯ ಶಕ್ತಿಯನ್ನು ಹೊರ ತಂದು ಅವನನ್ನು ಶ್ರೇಷ್ಠ ಪುರುಷಕನ್ನಾಗಿ ಪರಿವರ್ತಿಸುವುದೇ ಜ್ಞಾನ. ಅಂತಹ ಜ್ಞಾನವನ್ನು ನೀಡುವ ವಿಧಾನವೇ ಸಂಸ್ಕಾರ ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಾರೂ ಬ್ರಿಟೀಷರನ್ನು ಓಡಿಸಿ ತಾವು ಅಧಿಕಾರ ಪಡೆಯಬೇಕೆಂಬ ಇಚ್ಚೆ ಹೊಂದಿರ ಲಿಲ್ಲ. ಅಂತಹ ಯೋಚನೆ ಇದ್ದಿದ್ದರೆ ಡಚ್ಚರು, ಪೋರ್ಚುಗೀಸರು ಸೇರಿದಂತೆ ಪರಕೀಯರ ದಾಳಿಯಾದಗಲೇ ಹೋರಾಟಗಳು ನಡೆಯುತ್ತಿದ್ದವು. ಬ್ರಿಟೀಷರು ಭಾರತದ ಶಿಕ್ಷಣ ಸೇರಿದಂತೆ ಕೆಲ ಮೂಲ ವ್ಯವಸ್ಥೆಗಳನ್ನೇ ಬದಲಿಸಲು ಹೊರಟಾಗ ಜನ ಸಾಮಾನ್ಯರು ದಂಗೆ ಎದ್ದು ಹೋರಾಟಕ್ಕೆ ಧುಮುಕ ಬೇಕಾಯಿತು ಎಂದು ಹೇಳಿದರು.

ವಿದ್ಯೆ ಪಡೆದು, ಇತರರಿಗೂ ವಿದ್ಯೆಯನ್ನು ದಾನ ಮಾಡುವ  ಪ್ರಯತ್ನ ಗುರುಕುಲ ವ್ಯವಸ್ಥೆಯಲ್ಲಿತ್ತು. ಇಂತಹ ವ್ಯವಸ್ಥೆ ಬಗ್ಗೆ ಋುಷಿ ಮುನಿಗಳೇ ತಜ್ಞರಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಯಾವ ರಾಜರೂ ಸಹ ಇವರ ನೀತಿಗಳ ಬಗ್ಗೆ ಪ್ರಶ್ನಿಸುತ್ತಿರಲಿಲ್ಲ. ಆದರೆ ಬ್ರಿಟೀಷರು ಇಂತಹ ಗುರುಕುಲ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದರ ಫಲದಿಂದಾಗಿ ಬ್ರಿಟೀಷರು ದೇಶ ಬಿಟ್ಟು ಹೋಗಬೇಕಾಯಿತು ಎಂದರು.

ಇದೀಗ ಮತ್ತೆ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುನ್ನು ನನಸು ಮಾಡುವ, ಹಳೆಯ ಶಿಕ್ಷಣ ವ್ಯವಸ್ಥೆಯನ್ನೇ  ಇಂದಿನ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ವಿದ್ಯಾರ್ಥಿಯನ್ನು ಸ್ವಾವಲಂಬಿ, ಸ್ವಾಭಿಮಾನಿಯನ್ನಾಗಿ ಮಾಡಿ ಆ ಮೂಲಕ ವಿದ್ಯಾರ್ಥಿಯ ಏಳ್ಗೆ, ಸಮಾಜ ಹಾಗೂ ದೇಶದ ಏಳ್ಗೆಯಾಗಿ ದೇಶವನ್ನು ಪ್ರಪಂಚಕ್ಕೆ ಗುರುವನ್ನಾಗಿಸುವ ಪರಿಕಲ್ಪನೆಯನ್ನು ನೂತನ ಶಿಕ್ಷಣ ನೀತಿಯಿಂದ ಹೊಂದಲಾಗಿ ಎಂದು ಸಚಿವರು ಹೇಳಿದರು.

ಇದೇ ಸಂದರ್ಭದಲ್ಲಿ 10ಎಕ್ಸ್‌ಪ್ಲಸ್ ಕೈ ಪಿಡಿ ಬಿಡುಗಡೆ ಮಾಡಲಾಯಿತು.  ಶಿಕ್ಷಣ ಶಿಲ್ಪಿ ಎಂ.ಎಸ್. ಶಿವಣ್ಣ ಅವರ ಪುತ್ಥಳಿ ಅನಾವಾರಣಗೊಳಿಸಲಾಯಿತು.  ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಗಳಿಸಿದ ಅನುಷ ಗ್ರೇಸ್ ಡಿ.ಸಿ., ವಿಜೇತ ಪಿ. ಮುತ್ತಗಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಡಾ.ಡಿ.ಎಸ್. ಜಯಂತ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಟೆನ್‌ಎಕ್ಸ್‌ಪ್ಲಸ್ ತರಬೇತಿಯನ್ನು 100 ವಿದ್ಯಾರ್ಥಿಗಳಿಗೆ ನೀಡಿ ಯಶಸ್ವಿ ಫಲಿತಾಂಶ ಕಂಡಿದ್ದು, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು

ರಾಜ್ಯೋತ್ಸವದ ಅಂಗವಾಗಿ ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮದ ಭಾಗವಾಗಿ ಸಿದ್ಧಗಂಗಾ ಶಾಲೆಯಲ್ಲಿ ಶಿಕ್ಷಣ ಸಚಿವರ ಸಮ್ಮುಖದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’, ‘ಜೋಗದ ಸಿರಿ ಬೆಳಕಿನಲ್ಲಿ’ ಕನ್ನಡದ ಗೀತೆಗಳನ್ನು ಹಾಡಲಾಯಿತು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಜಸ್ಟಿನ್ ಡಿ’ಸೌಜ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಶಿವರಾಜು, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಿ.ಸಿ. ನಿರಂಜನ್, ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪುತ್ರ ಜಿ.ಎಸ್. ಅನಿತ್ ಕುಮಾರ್ ಉಪಸ್ಥಿತರಿದ್ದರು.

ಕು.ಅನುಷಾ ಗ್ರೇಸ್ ಮತ್ತು ತಂಡದವರು ಸ್ವಾಗತಿಸಿದರು. ಶ್ರೀಮತಿ ರೇಖಾರಾಣಿ ನಿರೂಪಿಸಿದರು. ಕು.ವಿಜೇತಾ ಬಿ. ಮುತ್ತಗಿ ವಂದಿಸಿದರು.

error: Content is protected !!