ಐಸಿಟಿಯೊಂದಿಗೆ ಬಿಐಇಟಿ ನೂತನ ಒಪ್ಪಂದ

ದಾವಣಗೆರೆ, ಫೆ. 22- ವಿದ್ಯಾರ್ಥಿಗಳ ಸರ್ವತೋಮುಖ ಶಿಕ್ಷಣಕ್ಕೆ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಫೆ. 17 ರಂದು ಐಸಿಟಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನಾಗಾಲೋಟದಿಂದ ಹೊಸ ಹೊಸ ಆಯಾಮಗಳತ್ತ ಮುಖಮಾಡಿ ನವ ನವೀನ ಬದುಕಿನತ್ತ ಸತತವಾಗಿ ಚಲಿಸುತ್ತಿರುವ ಇಂದಿನ ಹೊಸಯುಗ ಪ್ರತಿಕ್ಷಣ ಹೊಸದನ್ನೇ ಬಯಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಅಪಾರವಾದ ಸ್ಪರ್ಧೆಯನ್ನು ನಿರ್ಮಿಸಿದೆ.

ಈ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಂಡು ಬದುಕನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಕೇವಲ ಪರಿಕ್ರಮ ಶಿಕ್ಷಣ ಸಾಲದಾಗಿದ್ದು, ವಿದ್ಯಾರ್ಥಿಗಳು ಸಂವಹನಾಶೀಲತೆ, ಸಮಯ ನಿರ್ವಹಣಾ ಕೌಶಲ್ಯ, ಒಟ್ಟಾಗಿ ತಂಡದಲ್ಲಿ ಕೆಲಸ ಮಾಡುವ ಕೌಶಲ್ಯ, ಒತ್ತಡ ನಿರ್ವಹಣಾ ಸಾಮರ್ಥ್ಯ ಇತ್ಯಾದಿ ಅನೇಕ ಪಠ್ಯೇತರ ಮೃದು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದನ್ನು ಮನಗಂಡು ಬಿಐಇಟಿ ಐಸಿಟಿ ಕಂಪನಿಯೊಂದಿಗೆ ಅಸೋಸಿಯೇಟ್ ಸದಸ್ಯತ್ವ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದ ಮುಂದಿನ ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ.ಇದಲ್ಲದೆ ಐಸಿಟಿ ಕಂಪನಿಯು ಬಿಐಇಟಿ ವಿದ್ಯಾರ್ಥಿಗಳಿಗೆ ನೇಮಕಾತಿ ಪ್ಲಾಟ್‌ಫಾರ್ಮ್ ಒದಗಿಸಿದೆ. ಈಗಾಗಲೇ 100 ವಿದ್ಯಾರ್ಥಿಗಳು ಆರ್ನ್ಸ್ಟ ಅಂಡ್ ಎಂಗ್, ಟಾಟಾ ಎಲೆಕ್ಸಿ ಇನ್ಸರೇಜ್ ಇತ್ಯಾದಿ ಕಂಪನಿಗಳಲ್ಲಿ ನೇಮಕಾತಿ ಹೊಂದಲು ನೆರವಾಗಿದೆ.

ಬಿಐಇಟಿ ಕಾಲೇಜಿನ ಪ್ರಾಚಾರ್ಯ ಡಾ. ಹೆಚ್.ಬಿ. ಅರವಿಂದ್, ಐಸಿಟಿ ಕಂಪನಿಯ ರಾಜ್ಯ ಪ್ರಮುಖರಾದ ವಿಷ್ಣುಪ್ರಸಾದ್, ಕಂಪನಿಯ ಜಕಾವುಲ್ಲಾ ಇವರು ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ನಿಯೋಜನಾ ಡೀನ್ ಡಾ. ಸಿ.ಆರ್. ನಿರ್ಮಲ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

ಈ ಸಾಧನೆಗೆ ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ , ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜನ್ ಅಭಿನಂದಿಸಿದ್ದಾರೆ.

error: Content is protected !!