ರ‍್ಯಾಂಕ್ ವಿಜೇತ ಸೌಭಾಗ್ಯ ಬೀಳಗಿ ಮಠ್ ಮಕ್ಕಳಿಗೆ ಸ್ಫೂರ್ತಿ

ರ‍್ಯಾಂಕ್  ವಿಜೇತ ಸೌಭಾಗ್ಯ ಬೀಳಗಿ ಮಠ್ ಮಕ್ಕಳಿಗೆ ಸ್ಫೂರ್ತಿ

ದಾವಣಗೆರೆ, ಏ. 18 – ಒಂದರಿಂದ ಎಸ್ಸೆಸ್ಸೆಲ್ಸಿ ಎಂಬುದು ಒಂದು ಕಟ್ಟಡದ ಭದ್ರ ಅಡಿಪಾಯ ಇದ್ದಂತೆ. ಆದ್ದರಿಂದ ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಶಿಕ್ಷಣ ಬಹಳ ಮುಖ್ಯ ಎಂದು ಬಿಜೆಎಂ ಶಾಲೆ ಕಾರ್ಯದರ್ಶಿ ಮಂಜುನಾಥ ಅಗಡಿ ಹೇಳಿದರು. 

ನಗರದ ಎಜು ಏಷ್ಯಾ ಶಾಲೆಯಲ್ಲಿ ಇಂದು ಏರ್ಪಡಾಗಿದ್ದ, ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ 101ನೇ ರ‍್ಯಾಂಕ್ ಪಡೆದ ಶಾಲೆಯ ಹಳೆಯ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ್‌ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಈ ಶಾಲೆಯಲ್ಲಿ ಓದಿದ ಕೇವಲ ಒಬ್ಬ ಸೌಭಾಗ್ಯ ಅಲ್ಲದೇ, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಮುಂದೆ ಐಎಎಸ್, ಐಪಿಎಸ್ ಹುದ್ದೆಯನ್ನು ಅಲಂಕರಿಸುವಂತಾಗಲಿ ಎಂದು ಅವರು ಆಶಿಸಿದರು. 

ರಂಗಕರ್ಮಿ, ಶಾಲೆ ನಿರ್ದೇಶಕ ಆರ್.ಟಿ. ಅರುಣಕುಮಾರ್ ಮಾತನಾಡಿ, ಮಕ್ಕಳಿಗೆ ಬರೀ ಅಂಕ ಗಳಿಕೆ ಕಡೆಗೆ ಒತ್ತಡ ನೀಡದೇ ಅವರ ಅಭಿರುಚಿಗೆ ತಕ್ಕಂತೆ ಅವರನ್ನು ಬೆಳೆಯಲು ಬಿಡಿ. ಮಕ್ಕಳು ಓದಿನ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ನಿಮ್ಮ ಮುಂದಿನ ಸಾಧನೆಯ ಬಗ್ಗೆ ಕನಸು ಕಾಣಬೇಕು. ಅದು ನನಸಾಗುವಂತೆ ಕಷ್ಟಪಡಬೇಕು. ಅವರವರ ಆಸಕ್ತಿಗೆ ತಕ್ಕಂತೆ ಮಕ್ಕಳನ್ನು ತಯಾರು ಮಾಡುವುದು ಶಿಕ್ಷಕರ/ಪೋಷಕರ ಜವಾಬ್ದಾರಿಯಾಗಿದೆ. ಇದರಿಂದ ಬೇರೆ ಮಕ್ಕಳಿಗೂ ಸ್ಪೂರ್ತಿ ನೀಡಿದಂತಾಗುತ್ತದೆ ಎಂದು ಶುಭ ಹಾರೈಸಿದರು. 

ಶಾಲೆಯ ಕಾರ್ಯದರ್ಶಿ ಸಂತೊಷ್ ಕುಮಾರ್‌ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲು ಗುರು. ಅದರಂತೆ ಮಕ್ಕಳು ಮನೆಯಲ್ಲಿ ತಾಯಿ ನೀಡುವ ಶಿಕ್ಷಣ ಕಲಿತು, ಶಾಲೆಗಳಲ್ಲಿ ಗುರುಗಳು
ಹೇಳಿದ ಸಂಸ್ಕೃತಿ, ಸಂಸ್ಕಾರ ಕಲಿತರೆ, ಮುಂದೆ ಸೌಭಾಗ್ಯ ಬೀಳಗಿಮಠ್‌ ಅವರಂತೆ ಯಶಸ್ಸು ಕಾಣಲು ಸಾಧ್ಯ. ಈ ಸಂದರ್ಭದಲ್ಲಿ ಅವರು ಸೌಭಾಗ್ಯ ಅವರ ಹಳೆಯ ಶಾಲೆಯ ದಿನಗಳನ್ನು ನೆನಪಿಸಿದರು.

ಈ ಸಂದರ್ಭದಲ್ಲಿ ಸೌಭಾಗ್ಯ ಬೀಳಗಿಮಠ್‌ ಅವರ ತಂದೆ ಶರಣಯ್ಯ ಸ್ವಾಮಿ ಮತ್ತು ತಾಯಿ ಶ್ರೀಮತಿ ಶರಣಮ್ಮ, ಶಾಲೆಯ ಅಧ್ಯಕ್ಷರಾದ ನೀಲಮ್ಮ, ಆಡಳಿತ ಮಂಡಳಿ, ಪ್ರಾಚಾರ್ಯರಾದ ವಾಣಿ, ಅಂಗ ಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕರು, ಇತರರು ಇದ್ದರು. ಮಂಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!