ಜಗಳೂರಿಗೆ ಅನುದಾನ ನೀಡದ ಕೇಂದ್ರ

ಜಗಳೂರಿಗೆ ಅನುದಾನ ನೀಡದ ಕೇಂದ್ರ

ಭದ್ರಾ ಮೇಲ್ದಂಡೆ ಯೋಜನೆ ಜನರನ್ನು ದಿಕ್ಕುತಪ್ಪಿಸಿದ ಜನ ಪ್ರತಿನಿಧಿಗಳು : ಶಾಸಕ ದೇವೇಂದ್ರಪ್ಪ ಆರೋಪ ಭದ್ರಾ ಮೇಲ್ದಂಡೆ ತ್ವರಿತ ಜಾರಿಗೆ ಸರ್ವಪಕ್ಷ ನಿಯೋಗ, 57 ಕೆರೆ ತುಂಬಿಸುವ ಯೋಜನೆ ಬಹುತೇಕ ಪೂರ್ಣ

ಜಗಳೂರು, ಏ.15- ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕರು ಸಿಹಿ ಹಂಚುವ ಮೂಲಕ ಜನರಿಗೆ ಸುಳ್ಳು ಮಾಹಿತಿ ನೀಡಿದ್ದರು ಶಾಸಕ ಬಿ. ದೇವೇಂದ್ರಪ್ಪ ಆರೋಪಿಸಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ಇದುವರೆಗೂ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿಲ್ಲ. ಅನುದಾನವನ್ನೂ ನೀಡಿಲ್ಲ. ಆದರೆ, ಸ್ಥಳೀಯವಾಗಿ ಜನರನ್ನು ದಿಕ್ಕು ತಪ್ಪಿಸಲಾಗಿದೆ ಎಂದರು.

ಈ ಯೋಜನೆಯಡಿ ರಾಜ್ಯ ಸರ್ಕಾರದಿಂದ 130 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸುಮಾರು  200 ಕೋಟಿ ರೂ. ಹೆಚ್ಚು ಮೊತ್ತದ ಶೇ.20 ರಷ್ಟು ಕಾಮಗಾರಿ ಮುಗಿದಿದೆ. 

45 ಸಾವಿರ ಎಕರೆ ಪ್ರದೇಶದಲ್ಲಿ ಹಾಗೂ 62 ಹಳ್ಳಿಗಳ ವ್ಯಾಪ್ತಿಯಲ್ಲಿ ನೀರಾವರಿಯಾಗಲಿದ್ದು, 38 ಪಂಪ್‌ಹೌಸ್ ನಿರ್ಮಾಣ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮೊದಲು ಕೇಂದ್ರ ತನ್ನ ಪಾಲನ್ನು ಕೊಡಲಿ ಎಂದು ಆಗ್ರಹಿಸಿದರು.

57 ಕೆರೆಗಳನ್ನು ತುಂಬಿಸುವ ಯೋಜನೆಯಡಿ ಎಲ್ಲಾ ಕೆರೆಗಳಿಗೆ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಬಹುತೇಕ ಕಾಮಗಾರಿ ಮುಗಿದಿದ್ದು, ಈ ವರ್ಷದ ಮಳೆಗಾಲದಲ್ಲಿ ಕೆರೆಗಳಿಗೆ ನೀರು ಹರಿಯಲಿದೆ. ಇದರಲ್ಲಿ ಯಾವುದೇ ಗೊಂದಲ ಅನುಮಾನ ಬೇಡ ಎಂದು ಶಾಸಕರು ಭರವಸೆ ವ್ಯಕ್ತ ಪಡಿಸಿದರು.

ಭದ್ರಾ ಯೋಜನೆಯ ತ್ವರಿತ ಜಾರಿಗೆ ನಾನು ಹೋರಾಟ ಸಮಿತಿಯೊಂದಿಗೆ ಇದ್ದು, ಕೆಲಸ ಮಾಡುತ್ತೇನೆ. ನಾನು ಆಡಳಿತ ಪಕ್ಷದ ಶಾಸಕನಾಗಿದ್ದು, ನೀರಾವರಿ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಮಾತನಾಡುವೆ. ಕ್ಷೇತ್ರದ ನೀರಾವರಿ ಯೋಜನೆಗಳ ಜಾರಿಗೆ ನಾನು ಯಾವುದೇ ತ್ಯಾಗಕ್ಕೂ ಸಿದ್ಧನಾಗಿರುವೆ ಎಂದು ದೇವೇಂದ್ರಪ್ಪ ಸ್ಪಷ್ಟಪಡಿಸಿದರು.

ಚುನಾವಣೆ ಮುಗಿದ ನಂತರ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸಿ, ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು ಎಂದು ಶಾಸಕರು ಸ್ಪಷ್ಟಪಡಿಸಿದರು.

ಸಂಘಟನೆ ಮತ್ತು ಹೋರಾಟವಿಲ್ಲದೇ ಏನನ್ನೂ ಪಡೆಯಲು ಸಾಧ್ಯವಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ    ಮುಂದಿನ ದಿನಗಳಲ್ಲಿ ಎಲ್ಲರಿಗೂ ಮಾಹಿತಿ ಸಿಗಬೇಕು. ಮೂವರು ಮಾಜಿ ಶಾಸಕರನ್ನೊಳಗೊಂಡ ಸರ್ವಪಕ್ಷದ ಸಭೆಯನ್ನು   ಶಾಸಕರ ನೇತೃತ್ವದಲ್ಲಿ ಆಯೋಜನೆ ಮಾಡಬೇಕು ಎಂದು ಹೋರಾಟ ಸಮಿತಿ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ  ಒತ್ತಾಯಿಸಿದರು.

ನಿವೃತ್ತ ಪ್ರಾಂಶುಪಾಲ ಯಾದವರೆಡ್ಡಿ ಮಾತನಾಡಿ, 1967ರಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಅವಧಿಯಲ್ಲಿ ಪ್ರಾರಂಭವಾದ ಭದ್ರಾ ಮೇಲ್ದಂಡೆ ಯೋಜನೆ ಇದುವೆರೆಗೂ ತಾಲ್ಲೂಕಿನ ಪಾಲಿಗೆ ದಕ್ಕಿಲ್ಲ. ಇದುವರೆಗೆ ನಮ್ಮನ್ನಾಳಿದ ಶಾಸಕರುಗಳ ರಾಜಕೀಯ ನಿರ್ಲಕ್ಷ್ಯ ಮತ್ತು ಸುಳ್ಳು ಮಾಹಿತಿಯಿಂದ ಈ ಯೋಜನೆ ವಿಳಂಬವಾಗುತ್ತಿದೆ. ಹಾಲಿ ಶಾಸಕ ದೇವೇಂದ್ರಪ್ಪ ಅವರು ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಈಗಲೂ ಈ ಯೋಜನೆ ಜಾರಿಯಾಗದಿದ್ದಲ್ಲಿ ಎಂದೆಂದಿಗೂ ನೀರು ಬರಲು ಸಾಧ್ಯವಿಲ್ಲ ಎಂದರು.

ಈ ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಮುಖಂಡರಾದ ವಾಲಿಬಾಲ್ ತಿಮ್ಮಾರೆಡ್ಡಿ, ಸಿ.ತಿಪ್ಪೇಸ್ವಾಮಿ, ಡಾ.ಅಶೋಕ್ ಕುಮಾರ್ ಸಂಗೇನಹಳ್ಳಿ, ಬಿ.ಮಹೇಶ್ವರಪ್ಪ, ನಾಗಲಿಂಗಪ್ಪ, ವಕೀಲ ಆರ್.ಓಬಳೇಶ್, ಮಹಾಲಿಂಗಪ್ಪ, ಅನ್ವರ್ ಸಾಬ್, ಇಂದಿರಾ, ಚಿತ್ತಪ್ಪ, ಎಂ.ಎಸ್.ಪಾಟೀಲ್, ಶಂಶುದ್ದೀನ್, ಪ್ರಕಾಶ್ ರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ, ಮಾಯಣ್ಣ ಹಾಗೂ ಮತ್ತಿತರರಿದ್ದರು.

error: Content is protected !!