ಕಮ್ಮಾರಗಟ್ಟೆ : ಸಂಭ್ರಮದ ಆಂಜನೇಯಸ್ವಾಮಿ ರಥೋತ್ಸವ

ಕಮ್ಮಾರಗಟ್ಟೆ : ಸಂಭ್ರಮದ ಆಂಜನೇಯಸ್ವಾಮಿ ರಥೋತ್ಸವ

ಸಾಸ್ವೆಹಳ್ಳಿ, ಮಾ. 26 –   ಐತಿಹಾಸಿಕ, ಪುರಾಣ ಪ್ರಸಿದ್ಧಿ ಪಡೆದ ಕಮ್ಮಾರಗಟ್ಟೆ ಆಂಜನೇಯ ಸ್ವಾಮಿಯ ರಥೋತ್ಸವವು ನಾಡಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಬೆಳಗ್ಗೆ ಸಡಗರ, ಸಂಭ್ರಮದಿಂದ ನಡೆಯಿತು. 

ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ಮುಂಜಾನೆಯೇ ಯುವಕರು ಹಸಿರು ಬಾಳೆ, ಮಾವು, ಹೊಂಬಾಳೆಯಿಂದ ಗ್ರಾಮದ ರಾಜಬೀದಿಗಳನ್ನು ಶೃಂಗಾರಗೊಳಿಸಿದ್ದರು. ಮಹಿಳೆಯರು ಅಂಗಳದಲ್ಲಿ ರಂಗೋಲಿಯ ಚಿತ್ತಾರವ ಬಿಡಿಸಿ ವಿವಿಧ ಪುಷ್ಪಗಳಿಂದ ಶೃಂಗಾರಗೊಳಿಸಿದರು. ಗ್ರಾಮದ ಉತ್ಸವ ಹಾಗೂ ಉದ್ಭವ ಮೂರ್ತಿಗಳಿಗೆ ರುದ್ರಾಭೀಷೇಕ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಮೂರು ದಿನಗಳಿಂದ ಭಕ್ತರು ರಥಕ್ಕೆ ಬಣ್ಣದ ಧ್ವಜ, ಬಾಳೆಗೊನೆ ಹಾಗೂ ಆಳೆತ್ತರದ ಹೂವಿನ ಹಾರಗಳನ್ನು ಹಾಕಿ ಸಿಂಗಾರಗೊಳಿಸಿದರು. 

ಗ್ರಾಮದ ಆಂಜನೇಯ, ಸಿದ್ದೇಶ್ವರ, ಪಾರ್ಥಲಿಂಗೇಶ್ವರ, ಮುರುಡಲಿಂಗೇಶ್ವರ, ರಾಮಲಿಂಗೇಶ್ವರ ಉದ್ಭವ ಮೂರ್ತಿಗಳಿಗೆ ಪೂಜೆಗಳನ್ನು ಸಲ್ಲಿಸಲಾಯಿತು. ಉತ್ಸವ ಮೂರ್ತಿ ಆಂಜನೇಯ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಜಾನಪದ ಕಲಾಮೇಳಗಳೊಂದಿಗೆ ಭಕ್ತರು ಮೆರವಣಿಗೆ ಮಾಡಿ ರಥದಲ್ಲಿ ಪ್ರತಿಷ್ಠಾಪಿಸಿದರು. 

ತೇರಿನ ಗಾಲಿಗಳಿಗೆ ಭಲೆಬಾನದ ಎಡೆ, ಶಾಂತಿ ಪೂಜೆ  ನೆರವೇರಿಸಿದ ನಂತರ ಭಕ್ತರು ಗೋವಿಂದ, ಗೋವಿಂದ ಮಂತ್ರ ಜಯಘೋಷಗಳನ್ನು ಕೂಗುತ್ತಾ ತೇರನ್ನು ಎಳೆದರು. ರಥಕ್ಕೆ ಭಕ್ತರು ಮೆಣಸು ಮಂಡಕ್ಕಿ ಎರಚಿದರು. ಬಾಳೆಹಣ್ಣನ್ನು ಕಳಸಕ್ಕೆಸೆದು, ರಥದ ಗಾಲಿಗೆ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಹಾಗೂ ರಥೋತ್ಸವಕ್ಕೆ ಹಣ್ಣು ಕಾಯಿ ಒಡೆದು ಹರಕೆ ಸಲ್ಲಿಸಿದರು.

error: Content is protected !!