ಧಾರ್ಮಿಕ ಪರಂಪರೆಗೆ ಶರಣಾಗಲು ಯುವಕರಿಗೆ ಕರೆ

ಧಾರ್ಮಿಕ ಪರಂಪರೆಗೆ ಶರಣಾಗಲು ಯುವಕರಿಗೆ ಕರೆ

ಯಾವುದೇ ಸಮಾಜವಾದರೂ ತಮ್ಮ ಧಾರ್ಮಿಕ ಆಚರಣೆ, ಸಂಸ್ಕೃತಿ, ಸಂಸ್ಕಾರವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

– ಬಿ.ಸಿ. ಉಮಾಪತಿ, ಜವಳಿ ಉದ್ಯಮಿ


ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿಯಾಗುವ ಜತೆಗೆ ನಮ್ಮ ಸಮಾಜ ಹೆಚ್ಚಿನ ಅಭಿವೃದ್ಧಿ ಪಥದಲ್ಲಿ ಸಾಗಬೇಕು.

– ಅಖಂಡೇಶ್ವರ ಎಂ. ಪತ್ತಾರ್, ಪತ್ರಕರ್ತ


ಕಾಳಿಕಾಂಬೆಯ ಸನ್ನಿಧಿಯಲ್ಲಿ 93 ವಟುಗಳ ಉಪನಯನ, ಐದು ಜೊತೆ ನವ ದಂಪತಿಗಳ ಕಲ್ಯಾಣ ಉತ್ಸವದಲ್ಲಿ ಬಿ.ಸಿ. ಉಮಾಪತಿ

ದಾವಣಗೆರೆ, ಏ.26- ಯುವಕರು ತಪ್ಪು ದಾರಿ ತುಳಿಯದೇ ಧಾರ್ಮಿಕ ಪರಂಪರೆ, ಸಂಸ್ಕೃತಿ-ಸಂಸ್ಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಜವಳಿ ಉದ್ಯಮಿ ಬಿ.ಸಿ. ಉಮಾಪತಿ ವಿಶ್ವಕರ್ಮ ಸಮಾಜಕ್ಕೆ ಕರೆ ನೀಡಿದರು.

ವಿಶ್ವಕರ್ಮ ಸಮಾಜದ ವತಿಯಿಂದ ನಗರದ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ 41ನೇ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ದೇವಿಯ ಸನ್ನಿಧಿಯಲ್ಲಿ ಮಾಂಗಲ್ಯ ಧಾರಣೆ ಮಾಡಿರುವ ನವ ದಂಪತಿಗಳೇ ಪುಣ್ಯವಂತರು, ಕಾಳಿಕಾಂಬೆಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ ಎಂದು ಶುಭ ಕೋರಿದರು.

ವಿಶ್ವಕರ್ಮ ಸಂಘ ಮತ್ತು ಸಮಾಜದ ಕೊಡುಗೆಯಿಂದ ದೇವಸ್ಥಾನ ಅಭಿವೃದ್ಧಿ ಗೊಂಡಿದೆ. ನಾನೂ ಸಹ ಕಾಳಿಕಾದೇವಿಯ ಪ್ರತಿಮೆಗೆ ಬಂಗಾರದ ಮುಖ ತಯಾರಿಸಲು ಹೇಳಿದ್ದೇನೆ, ಶೀಘ್ರದಲ್ಲೇ ದೇವಿಗೆ ಸಮರ್ಪಣೆ ಆಗಲಿದೆ ಎಂದರು.

ಹರಿಹರ ತಾಲ್ಲೂಕಿನ ಅಧ್ಯಕ್ಷ ಎಸ್‌. ರುದ್ರಾಚಾರ್‌ ಮಾತನಾಡಿ, ಸಮಾಜದ ಮಕ್ಕಳು ಶಾಸ್ತ್ರಕ್ಕೆ  ಉಪನಯನ ಮಾಡಿಕೊಂಡು ಆಚರಣೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪನಯನ ಆದವರು ದಿನದ ಮೂರು ಕಾಲ ಸಂಧ್ಯಾವಂದನೆ ಮಾಡಬೇಕು. ಆದರೆ ನಮ್ಮ ಸಮಾಜದ ಮಕ್ಕಳಿಗೆ ಇದರ ಪರಿಚಯ ಅಲ್ಪವಾಗಿದೆ. ಆದ್ದರಿಂದ ಸಂಘದ ವತಿಯಿಂದ ಮಕ್ಕಳಿಗೆ ಈ ಕುರಿತು ಗುರುಗಳಿಂದ ಬೋಧನೆ ಆಗಬೇಕು ಎಂದು ಆಶಿಸಿದರು.

ಈ ವೇಳೆ 5 ಜೊತೆ  ಸಾಮೂಹಿಕ ಮದುವೆ ಹಾಗೂ 93 ವಟುಗಳಿಗೆ ಉಪನಯನ ಮಾಡಲಾಯಿತು. ಸಮಾಜದ ಮುಖಂಡ ಬಿ.ವಿ. ಶಿವಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಶ್ವಕರ್ಮ ಸಂಘದ ಅಧ್ಯಕ್ಷ ಬಸಾಪುರದ ಬಿ. ನಾಗೇಂದ್ರಾಚಾರ್, ಗೌರವಾಧ್ಯಕ್ಷ ಬಿ.ಎಲ್‌. ಸೀತಾರಾಮಚಾರ್‌, ಆಡಳಿತಾಧಿಕಾರಿ ಬಿ.ಪಿ. ಜಗನ್ನಾಥ್‌, ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಎಸ್‌. ತಿಪ್ಪೇಸ್ವಾಮಿ, ಪತ್ರಕರ್ತ ಅಖಂಡೇಶ್ವರ ಎಂ. ಪತ್ತಾರ್ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.

error: Content is protected !!