ಸವಳಂಗ ಕೆರೆ ವ್ಯಾಪ್ತಿಯ 7 ಹಳ್ಳಿಗಳಿಗೆ 10 ದಿನಗಳು 30 ಎಮ್‍ಸಿಎಫ್‍ಟಿ ನೀರು ಬಿಡಲು ತೀರ್ಮಾನ

ಸವಳಂಗ ಕೆರೆ ವ್ಯಾಪ್ತಿಯ 7 ಹಳ್ಳಿಗಳಿಗೆ 10 ದಿನಗಳು 30 ಎಮ್‍ಸಿಎಫ್‍ಟಿ ನೀರು ಬಿಡಲು ತೀರ್ಮಾನ

ಹೊನ್ನಾಳಿ, ಮಾ. 6-  ನ್ಯಾಮತಿ ತಾಲ್ಲೂಕಿನ ಸವಳಂಗ ಕಾಯಕ ಕೆರೆ (ಹೊಸಕೆರೆ) ಯ ಅಚ್ಚುಕಟ್ಟು ವ್ಯಾಪ್ತಿಯ ಹಳ್ಳಿಗಳ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಂಗಳಲ್ಲಿ 10 ದಿನಗಳು ಕಾಲ 30 ಎಮ್‍ಸಿಎಫ್‍ಟಿ ನೀರು ಬಿಡಬೇಕೆಂದು ತೀರ್ಮಾನ ಕೈಕೊಳ್ಳಲಾಯಿತು.

ಬುಧವಾರ ಪಟ್ಟಣದ ಪ್ರವಾಸಿ ಮಂದಿ ರದಲ್ಲಿ ಶಾಂತನಗೌಡರೊಂದಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ, ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್, ದಾವಣಗೆರೆ ಸಿಇಒ ಸುರೇಶ್ ಇಟ್ನಾಳ್, ಹೊನ್ನಾಳಿ ಉಪವಿಭಾಗದ ಎಸಿ ಅಭಿಷೇಕ್, ಶಿವಮೊಗ್ಗ ಎಸಿ ಹಾಗೂ ಇಂಜಿನಿಯರ್ ಸಮ್ಮುಖದಲ್ಲಿ ಕೆರೆ ಅಚ್ಚು ಕಟ್ಟು ವ್ಯಾಪ್ತಿಯ ರೈತರ ಸಭೆ ನಡೆಸಲಾಯಿತು.

ಮಾ. 2 ರ ಶನಿವಾರದಂದು ಶಿವಮೊಗ್ಗ ಜಿಲ್ಲಾ ಮಾಂಡ್ರಳ್ಳಿ, ಮಲ್ಲಾಪುರ, ಸುತ್ತು ಕೋಟಿ ಗ್ರಾಮದವರು ನ್ಯಾಮತಿ ತಾಲ್ಲೂಕಿನ ಸವಳಂಗದ ಗ್ರಾಮದ ಹೊಸಕೆರೆಯ ನೀರು ಹರಿಯುವುದಕ್ಕೆ ಗೇಟ್ ಹಾಕಿ ತಡೆದಿದ್ದರು. ನ್ಯಾಮತಿ ತಾಲೂಕಿನ ಸವಳಂಗ,  ಸೋಗಿಲು, ಚಟ್ನಹಳ್ಳಿ, ಗಂಜೀನಹಳ್ಳಿ, ಕಂಚಿಗನಾಳ್, ಕೋಡಿಕೊಪ್ಪ ಸೇರಿದಂತೆ ಇತರೆ ಗ್ರಾಮಗಳ ಬೇಸಿಗೆ ಬೆಳೆಗಳು ಹಾನಿಯಾಗುವ ಬಗ್ಗೆ ಮಾಹಿತಿ ಯನ್ನು ರೈತರು ಶಾಸಕರಿಗೆ ಗಮನಕ್ಕೆ ತಂದಿದ್ದರು. ಹಾಗಾಗಿ ಬುಧವಾರ ಸಭೆ ನಡೆದಿದೆ.

ದಾವಣಗೆರೆ, ಶಿವಮೊಗ್ಗ ಇಂಜಿನಿಯರ್ ಹೊರತುಪಡಿಸಿ ಬೇರೆ ಜಿಲ್ಲೆಗಳ ಇಂಜಿನಿಯರ್ ಮೂಲಕ ಕೆರೆಯ ನೀರಿನ ಮಟ್ಟದ ವಸ್ತುಸ್ಥಿತಿ ತಿಳಿಯಲು ಹಾಗೂ ರೈತರಿಗೆ ನೀರಿನ ಅಗತ್ಯ ಎಷ್ಟರಮಟ್ಟಿಗೆ ಇದೆ ಎಂಬ ವರದಿ ಪಡೆಯಲು ಸಭೆ ತೀರ್ಮಾನಿಸಿದ್ದು, ಕೆರೆಯಲ್ಲಿ ನೀರು ಡೆಡ್ ಸ್ಟೋರೇಜಾದರೆ ಅಗತ್ಯಕ್ಕೆ ಅನುಗುಣವಾಗಿ ರೈತರು ಟ್ಯಾಂಕರ್‍ನಲ್ಲಿ ನೀರು ಪಡೆಯಬಹುದಾಗಿದೆ.

ಸಭೆಯಲ್ಲಿ ಇಂಜಿನಿಯರ್ ಆನಂದ್, ಚಿತ್ರದುರ್ಗ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಧಾಕೃಷ್ಣ, ಹೊನ್ನಾಳಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ವಿಕಾಸ್, ನ್ಯಾಮತಿ- ಹೊನ್ನಾಳಿ ತಹಶೀಲ್ದಾರ್ ಸೇರಿದಂತೆ ಅಚ್ಚು ಕಟ್ಟಿನ ರೈತರು ಭಾಗವಹಿಸಿದ್ದರು.

error: Content is protected !!