ಕ್ಯಾನ್ಸರ್‌ ತಪಾಸಣೆ ಶೇ.1ಕ್ಕಿಂತ ಕಡಿಮೆ

ಕ್ಯಾನ್ಸರ್‌ ತಪಾಸಣೆ ಶೇ.1ಕ್ಕಿಂತ ಕಡಿಮೆ

ಬಾಪೂಜಿ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಿಷಾದ

ದಾವಣಗೆರೆ, ಮಾ. 6 – ಕರ್ನಾಟಕದಲ್ಲಿ ಪ್ರತಿ ವರ್ಷ ಕ್ಯಾನ್ಸರ್ ರೋಗಿಗಳ ಪ್ರಮಾಣ ಶೇ.1ರಷ್ಟು ಹೆಚ್ಚಾಗುತ್ತಿದೆ. ಆದರೂ, ಸ್ಥನ ಕ್ಯಾನ್ಸರ್ ಹಾಗೂ ಗರ್ಭಕಂಠ ಕ್ಯಾನ್ಸರ್‌ಗಳ ತಪಾಸಣೆ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ ಎಂದು ಎಸ್.ಎಸ್. ಕೇರ್ ಟ್ರಸ್ಟ್‌ನ ಟ್ರಸ್ಟೀ ಹಾಗೂ ಬಾಪೂಜಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಿಷಾದಿಸಿದ್ದಾರೆ.

ನಗರದ ಬಿಐಇಟಿ ಕಾಲೇಜಿನಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕ್ಯಾನ್ಸರ್‌ ಕಾಳಜಿ – ಕ್ಯಾನ್ಸರ್ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

35 ವರ್ಷದ ನಂತರ ಮಹಿಳೆಯರು ಕ್ಯಾನ್ಸರ್‌ ಕುರಿತು ನಿಯಮಿತ ತಪಾಸಣೆಗೆ ಒಳಪಡಬೇಕು. ಈ ಬಗ್ಗೆ ಸಾಕಷ್ಟು ಮಹಿಳೆಯರಲ್ಲಿ ಅರಿವಿಲ್ಲ. ಇದರಿಂದಾಗಿ ನಾಲ್ಕನೇ ಹಂತಕ್ಕೆ ಕ್ಯಾನ್ಸರ್ ತಲುಪಿದ ನಂತರ ಚಿಕಿತ್ಸೆಗೆ ಬರುತ್ತಿದ್ದಾರೆ. ಆ ಹಂತದಲ್ಲಿ ಜೀವಕ್ಕೆ ಅಪಾಯ ಹೆಚ್ಚಾಗಿರುತ್ತದೆ ಎಂದವರು ಹೇಳಿದರು.

ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಹೆಚ್ಚು ಸುಲಭ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಉಚಿತ ತಪಾಸಣೆ ಸಹ ಕೈಗೊಳ್ಳಲಾಗುತ್ತಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳು, ಮಹಿಳೆಯರು, ಹದಿ ಹರೆಯದವರಿಂದ ಹಿಡಿದು ಎಲ್ಲರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ನೆರವು ನೀಡಲಾಗುತ್ತಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಾಪೂಜಿ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಕಾಯಿಲೆಗಳು ಹಾಗೂ ತಪಾಸಣೆ ಕುರಿತು ಮಹಿಳೆಯರು ಅರಿವು ಬೆಳೆಸಿಕೊಳ್ಳಬೇಕು. ಇತರರೂ ತಪಾಸಣೆಗೆ ಒಳಗಾಗಲು ಪ್ರೋತ್ಸಾಹಿಸಬೇಕು. ಇದರಿಂದ ಆರಂಭದಲ್ಲೇ ರೋಗ ಪತ್ತೆಯಾಗಿ, ಸಮಸ್ಯೆ ದೊಡ್ಡ ಮಟ್ಟಕ್ಕೆ ಬೆಳೆಯುವುದು ತಪ್ಪುತ್ತದೆ ಎಂದರು.

ವೇದಿಕೆಯ ಮೇಲೆ ಕ್ಯಾನ್ಸರ್ ರೋಗ ಗೆದ್ದಿರುವ ವೈದ್ಯೆ ಡಾ. ಗಿರಿಜಾ ನಾಡಗೌಡರ್ ಉಪಸ್ಥಿತರಿದ್ದರು.

ಅಖಿಲ್ ಹಾಗೂ ಉದಯ್ ಪ್ರಾರ್ಥಿಸಿದರು. ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಮೂಗನಗೌಡ ಪಾಟೀಲ್ ಸ್ವಾಗತಿಸಿದರು.

error: Content is protected !!