ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ

ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇನೆ: ವಿನಯ್ ಕುಮಾರ್ 

ದಾವಣಗೆರೆ, ಏ.21- ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧನಾಗಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ, ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ಆಮೇಲೆ ನೀವೇ ಹುಬ್ಬೇರುವಂತೆ ಕೆಲಸ ಮಾಡಿ ತೋರಿಸುತ್ತೇನೆ. ಒಂದು ಅವಕಾಶ ಕೊಟ್ಟು ನೋಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು. 

ಭಾಷಾನಗರದ ಸಮೀಪವಿರುವ ಶಿವನಗರದಲ್ಲಿ ಮುಸ್ಲಿಂ ಬಾಂಧವರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ಕೇವಲ ಭರವಸೆ ಕೊಟ್ಟು ಹೋಗುವವನಲ್ಲ. ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಯಾವ ಹೊಂದಾಣಿಕೆಯನ್ನೂ ಮಾಡಿಕೊಂಡಿಲ್ಲ. ತಪ್ಪು ಸಂದೇಶಗಳಿಗೆ ತಲೆಕೆಡಿಸಿಕೊಳ್ಳಬೇಡಿ, ಮಹತ್ವವನ್ನೂ ಕೊಡಬೇಡಿ ಎಂದು ಹೇಳಿದರು. 

ಬಾಷಾ, ಆಜಾದ್ ನಗರ ಸೇರಿದಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನನ್ನನ್ನು ಭೇಟಿಯಾಗುತ್ತಿರುವ ಮುಖಂಡರು ಈ ಮಾಹಿತಿ ನೀಡಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ಬನ್ನಿ. ನಾನು ಲೋಕಸಭಾ ಸದಸ್ಯನಾದರೆ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. 

ಮುಸ್ಲಿಂ ಸಮುದಾಯದವರು ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಬಡವರ ಮಕ್ಕಳು ವಿದ್ಯಾವಂತರಾಗಬೇಕು. ನಿಮ್ಮ ಮಕ್ಕಳು ಓದಿ ಒಳ್ಳೆಯ ಸ್ಥಾನಮಾನ ಪಡೆಯುವಂತಾಗಬೇಕು. ಉನ್ನತ ಹುದ್ದೆಗೂ ಹೋಗಬೇಕು. ಇದಕ್ಕೆ ನಾನು ನಿಮಗೆ ಸಹಾಯ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ನೀಡುವುದರ ಮೂಲಕ ಆರಿಸಿ ದೆಹಲಿಗೆ ಕಳುಹಿಸಬೇಕು ಎಂದು ಕೇಳಿಕೊಂಡರು. 

ನಿಮ್ಮೆಲ್ಲರ ಸಮಸ್ಯೆಗಳನ್ನು ನನ್ನ ಸಮಸ್ಯೆ ಎಂದು ಪರಿಗಣಿಸಿ ಪರಿಹರಿಸಲು ಶ್ರಮಿಸುತ್ತೇನೆ. ಭರವಸೆ ಕೊಟ್ಟು ಹೋಗುವುದಿಲ್ಲ. ಈಡೇರಿಸಿದ ಬಳಿಕ ನೀವೇ ಹೇಳುತ್ತೀರಾ. ಹಾಗಾಗಿ, ಸ್ವಾಭಿಮಾನಿಯಾಗಿ ಪಕ್ಷೇತರನಾಗಿ ಕಣಕ್ಕಿಳಿದಿದ್ದೇನೆ. ನೀವೆಲ್ಲರೂ ಬೆಂಬಲಿಸಿ, ಗೆಲ್ಲಿಸಿ ಎಂದು ಮನವಿ ಮಾಡಿದರು. 

ನಾನು ಹೋದ ಕಡೆಗಳಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಅಲ್ಪಸಂಖ್ಯಾತರು, ಲಿಂಗಾಯತರು, ವಾಲ್ಮೀಕಿ ಸಮುದಾಯವರು, ಲಿಂಗಾಯತ ಸಮಾಜದವರು ಸೇರಿದಂತೆ ಎಲ್ಲಾ ವರ್ಗದವರು ಜಾತಿ, ಧರ್ಮ ಭೇದ ಮರೆತು ಸಹಕಾರ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚು ಹೆಚ್ಚಾಗಿ ಬೆಂಬಲ ನೀಡುತ್ತಿದ್ದಾರೆ. ನೀವೆಲ್ಲರೂ ಒಟ್ಟಾಗಿ ನನ್ನ ಗೆಲುವಿಗೆ ಕೆಲಸ ಮಾಡಿ. ಸ್ವಾಭಿಮಾನದ ಗೆಲುವು ನಿಮ್ಮದಾಗುತ್ತದೆ ಎಂದು ವಿನಯ್ ಕುಮಾರ್ ಹೇಳಿದರು. 

error: Content is protected !!